ಪ್ರಾಚೀನ ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದಲ್ಲಿ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಜಾನಪದ ವಿಶ್ವಕೋಶ ಸಂಪುಟಗಳು, ಕನ್ನಡ ನಿಘಂಟುಗಳು, ಕನ್ನಡ ಶಬ್ದಕೋಶಗಳು, ಕನ್ನಡ ವಿಷಯ ವಿಶ್ವಕೋಶಗಳು. ಕನ್ನಡ ಇಂಗ್ಲಿಷ್ ಅರ್ಥಕೋಶಗಳು, ಮುಂತಾದ ರಚನನೆಗಳು ಪ್ರಕಟಗೊಂಡು ನಮ್ಮ ಮುಂದಿವೆ. ಇವು ಭಾಷೆಯಲ್ಲಿ ಬಳಕೆಯಾಗಿರುವ ವಿಶಿಷ್ಟ ಪದಗಳನ್ನು, ಶಬ್ದಗಳನ್ನು, ಶಬ್ದಾರ್ಥಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಆದರೆ ಪ್ರಾಚೀನ ಕನ್ನಡ ಶಾಸನಶಾಸ್ತ್ರಕ್ಕೆ ಸಂಬಂಧಿಸಿದಂತೆ ಇದುವರಿಗೂ ಅಂಥ ಕೆಲಸ ನಡೆದಿಲ್ಲವಾದ್ದರಿಂದ ಬಹಳ ಮುಖ್ಯವಾಗಿ ಈ ಕೆಲಸ ಅಗಬೇಕಿದೆ. ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಆ ನಂತರದ ಕನ್ನಡ ಭಾಷಾ ಸ್ವರೂಪ ಅರಿತುಕೊಳ್ಳಲು ಬೇಕಾದ ಮೂಲ ಸಾಮಾಗ್ರಿ ಕನ್ನಡ ಶಾಸನಗಳಲ್ಲಿ ದೊರಕುತ್ತದೆ.
ಹಾಗಾಗಿಯೆ ಶಾಸನಗಳ ಪಾರಿಭಾಷಿಕ ಪದಕೋಶಗಳು ರಚನೆ ಆಗಬೇಕು. ಅಸಂಖ್ಯಾ ಶಾಸನಗಳು ಲಭ್ಯವಿದ್ದರೂ ಅದರ ಪರಿಭಾಷೆಯನ್ನು ನಾವು ಇನ್ನೂ ಸಮಗ್ರವಾಗಿ ಗ್ರಹಿಸಲು ಸಾದ್ಯವಾಗಿಲ್ಲ. ಕೆಲವು ಬಿಡಿ ಬಿಡಿ ಅಧ್ಯಯನಗಳು ನಡೆದಿರಬಹುದಾದರೂ ಅದು ತೀರಾ ಕಡಿಮೆ ಎಂದೇ ಹೇಳಬೆಕು. ಪ್ರಾಚೀನ ಕರ್ನಾಟಕ, ಅದರ ಸಂಸ್ಕೃತಿ, ಭಾಷೆ, ರೀತಿ ನೀತಿಗಳನ್ನು ಅರ್ಥಮಾಡಿಕೊಳ್ಳಲು ಈ ರೀತಿ ಅಧ್ಯಯನಗಳು ಸಹಕಾರಿಯಾಗುತ್ತವೆ. ಕರ್ನಾಟಕವನ್ನು ವಿವಿಧ ರಾಜರು, ಸಾಮಂತರು, ಪಾಳಯಗಾರರು ಆಳ್ವಿಕೆ ಮಾಡಿರುವುದರಿಂದ ಭಾಷೆ ಅನೇಕ ಅವಸ್ಥಾಂತರಗಳನ್ನು, ಘಟ್ಟಗಳನ್ನು ಎದುರಿಸಿಕೊಂಡು ರೂಪುಗೊಂಡಿರುವುದು ಸತ್ಯ. ಹಾಗಾಗಿ ಅಂಥ ಭಾಷೆಯಲ್ಲಿರುವ ಪರಿಭಾಷೆಯನ್ನು ಈ ಮುಂದಿನಂತೆ ವಿಭಾಗಿಸಿಕೊಂಡು ಅಧ್ಯಯನ ಅಥವಾ ಸಂಶೋಧನೆ ಮಾಡಬಹುದಾಗಿದೆ.
೧. ರಾಜರ ಬಿರುದಾವಳಿಗಳು ೨. ಅಧಿಕಾರ -ಆಡಳಿತ ಸೂಚಕ ಪಾರಿಭಾಷಿಕ ಪದಗಳು೩. ಅಲತೆ, ಮಾನ, ಮಾಪನ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳು ೪. ವಿವಿಧ ವೃತ್ತಿ, ತೆರಿಗೆ ಸೂಚಕ ಪದಕೋಶಗಳು ೫. ದಾನ, ದತ್ತಿ, ಮಾನ್ಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳು ೬. ಪ್ರಾಂತೀಯ, ವಿಭಾಗ ಸೂಚಕ ಪದಕೋಶಗಳು ೭. ಪ್ರಾಚೀನ ನ್ಯಾಯ ತೀರ್ಮಾನಗಳಿಗೆ ಸಂಬಂಧಿಸಿದ ಪದಕೋಶಗಳು ೮. ಕರ್ನಾಟಕ ಭೌಗೋಳಿಕ, ಸ್ಥಳನಾಮ, ವ್ಯಕ್ತಿ ನಾಮ ಇತ್ಯಾದಿ ೯. ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸ, ವೈದ್ಯೆ, ಸಂಗೀತ, ಕಲೆ, ವಸ್ತು ಇತ್ಯಾದಿಗೆ ಸಂಬಂಧಿಸಿದ ಪದಕೋಶ. ಹೀಗೆ ಕಾಲಕಾಲಕ್ಕೆ ಬಳಸಿಕೊಂಡು ಬಂದಿರುವ ಪರಿಭಾಷೆಗೆ ಸಂಬಂಧಿಸಿದಂತೆ ಸಮಗ್ರ ರೀತಿಯ ಪದಕೋಶಗಳು ಸಿದ್ದ ಆಗಬೇಕಿದೆ. ಇದು ಸಹ ಕಾಲಮಾನ, ರಾಜ ವಂಶ, ಇತ್ಯಾದಿಗಳ ಆಧಾರದ ಮೇಲೆ ರಚಿತವಾದರೆ ಒಳ್ಳೆಯದು. ಹಾಗೆಯೇ ಶಾಸನಗಳಿಗೆ ಸಂಬಂಧಿಸಿದ ನಿಘಂಟುಗಳು ವಿಶ್ವಕೋಶ ಮಾದರಿಯ ‘ಶಾಸನ ಕೋಶ’ ಶಾಸನಗಳ ಸಾಂಸ್ಕೃತಿಕ ಪದಕೋಶಗಳು ಸಿದ್ದಗೊಳ್ಳಬೇಕಿದೆ.
ಸಮಾಪನ ಇದುವರೆಗೆ ನೋಡಿದ ಪ್ರಕಾರ ಕದ್ರಿಯಲ್ಲಿ ಬೌದ್ಧ, ನಾಥ ಹಾಗೂ ಶೈವ ಪಂಥಗಳು ಕಾಲಕಾಲಕ್ಕೆ ತಮ್ಮ ಅಸ್ತಿತ್ವವನ್ನು ಕಂಡುಕೊಂಡುವು. ಅಲ್ಲಿ ಬೌದ್ಧಧರ್ಮವಿದ್ದುದನ್ನು ಈಗ ದೇವಾಲಯದಲ್ಲಿರುವ ಮೂರ್ತಿಶಿಲ್ಪ, ವಾಸ್ತುಶಿಲ್ಪ ಹಾಗೂ ಶಾಸನಗಳ ಆಧಾರದಿಂದ ಸಾಬೀತುಪಡಿಸಲಾಗುತ್ತದೆ. ಸುತ್ತು ಮುತ್ತಣ ಜನರ ಮೇಲೆ ಬೌದ್ಧ ಧರ್ಮವು ಪ್ರಭಾವ ಬೀರಿದುದಕ್ಕೆ ಇಂದು ಅಲ್ಲಿ ಯಾವುದೇ ರೀತಿಯ ಕುರುಹುಗಳಿಲ್ಲ. ಆದರೆ ನಾಥಪಂಥವು ಈಗಲೂ ಅಲ್ಲಿ ಜೀವಂತವಾಗಿದೆ. ಕದ್ರಿಗುಡ್ಡದಲ್ಲಿ ನಾಥಪಂಥೀಯ ಮಠವಿದೆ. ಕದ್ರಿಯ ಆಸುಪಾಸಿನಲ್ಲಿ ನಾಥಪಂಥೀಯರಾದ “ಜೋಗಿ” ಜನ ಸಮುದಾಯದವರಿದ್ದಾರೆ. ಹೀಗಿದ್ದರೂ ಕದ್ರಿಯಲ್ಲ ಈಗ ಜನಾಕರ್ಷಣೆಯ ಕೇಂದ್ರವಾಗಿರುವುದು ಮಂಜುನಾಥ ದೇವಾಲಯ.
ಶಿವ ದೇವಾಲಯವಾಗಿರುವುದರಿಂದ ಇದನ್ನು ಶೈವ ಧರ್ಮಕ್ಕೆ ಸೇರಿದುದೆನ್ನಬಹುದು. ಆದರೆ ಶೈವರು, ವೈಷ್ಣವರು, ಸ್ಮಾರ್ತರೆನ್ನದೆ “ಹಿಂದು”ಗಳಾದ ಎಲ್ಲರೂ ಈ ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ. ಇಲ್ಲಿ ಪೂಜಾರಿಗಳಾಗಿರುವವರೂ ವೈಷ್ಣವರಾದ ಶಿವಳ್ಳಿ ಬ್ರಾಹ್ಮಣರು. ಪ್ರತಿ ವರ್ಷ ಧನುರ್ಮಾಸ ೩೦ ರಿಂದ ಮಕರ ಮಾಸ ೮ರವರೆಗೆ[1]ಇಲ್ಲಿ ಒಂಬತ್ತು ದಿನಗಳ ವರ್ಷಾವಧಿ ಜಾತ್ರೆಯು ನಡೆಯುತ್ತದೆ. ಆ ಸಂದರ್ಭದಲ್ಲಿ ನಾಥಪಂಥೀಯ ಪೀಠಾಧಿಪತಿಗಳಿಗೂ ವಿಶೇಷ ಸ್ಥಾನಮಾನಗಳು ಸಲ್ಲುತ್ತವೆ. ಮೂಲತಃ ಕದ್ರಿಯ ಶಿವಾಲಯ ಕೂಡ ನಾಥ ಪಂಥೀಯರಿಂದಲೇ ಹುಟ್ಟಿಕೊಂಡಿತೆಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಆದರೆ ಇಂದು ನಾಥಪಂಥ ಮತ್ತು ಅದಕ್ಕೆ ಸಂಬಂಧಿಸಿದ ಮಠ ಅಲ್ಲಿ ಗೌಣವಾಗಿ ಮಂಜುನಾಥ ದೇವಾಲಯವೇ ಪ್ರಧಾನವಾಗಿದೆ. ದೇವಾಲಯಕ್ಕೆ ಬಂದ ಎಲ್ಲಾ ಭಕ್ತಾದಿಗಳು ಗುಡ್ಡದ ಮೇಲಿರುವ ಮಠಕ್ಕೆ ಹೋಗುವುದಿಲ್ಲ. ಮಠವು ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯದಿದ್ದುದೇ ಇದಕ್ಕೆ ಕಾರಣವೆಂದು ಹೇಳಬಹುದು. ದೇವಾಲಯವಾದರೆ ಅಸಂಖ್ಯ ಭಕ್ತರನ್ನು ಆಕರ್ಷಿಸುವ ರೀತಿಯಲ್ಲಿ ವಿನೂತನವಾಗಿ ಬೆಳೆಯುತ್ತಲಿದೆ. ಅಲ್ಲಿ ಭಕ್ತರು ಒಂದು ಬಗೆಯ ‘ಭ್ರಾಮಕ ನೆಮ್ಮದಿ’ಯನ್ನು ಕಂಡು ಕೊಳ್ಳುತ್ತಾರೆ. ಅಂತಹ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಕದ್ರಿಯ ಮಂಜುನಾಥ ದೇವಾಲಯವು ಇಂದು ನಾಥಪಂಥದ ನೇರ ಹಿಡಿತದಿಂದ ತಪ್ಪಿಸಿಕೊಂಡು ಸಂಪೂರ್ಣವಾಗಿ ವೈದಿಕೀಕರಣಗೊಂಡು ಬೆಳೆದು ನಿಂತಿದೆ. ಧಾರ್ಮಿಕ ನಂಬಿಕೆಯ ಕಾರಣವೋ ಏನೋ! ಕೆಲವು ವಿಶೇಷ ಸಂದರ್ಭಗಳಲ್ಲಷ್ಟೆ ನಾಥಪಂಥೀಯ ಸ್ವಾಮಿಗಳ ಹಸ್ತಕ್ಷೇಪ ದೇವಾಲಯದಲ್ಲಿ ಕಂಡು ಬರುತ್ತದೆ. ಹೀಗೆ ‘ಧರ್ಮ’ದ “ಅವಸ್ಥಾಂತರ”ಕ್ಕೆ ಕದ್ರಿಯು ಒಂದು ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ನಾಡಿನಾದ್ಯಂತ ಇರಬಹುದಾದ ಇಂಥ ಧಾರ್ಮಿಕ ಸ್ಥಿತ್ಯಂತರದ ಕೇಂದ್ರಗಳ ಬಗೆಗೆ ಕೂಲಂಕುಷವಾಗಿ ಅಧ್ಯಯನ ನಡೆಸಿದರೆ ವಿಶಿಷ್ಟವಾದ ಧಾರ್ಮಿಕ ಇತಿಹಾಸವೊಂದು ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.
ಜುಂಜಪ್ಪನ ಇನ್ನೊಂದು ಸ್ಥಾನ‘ಜಾನಪದ ದೇವರು ಜುಂಜಪ್ಪ’ ‘ಮೈಲಾರಲಿಂಗ ಮತ್ತು ಪರಿವಾರ ದೇವತೆಗಳು’ ಮೊದಲಾದ ಲೇಖನಗಳಲ್ಲಿ ಜುಂಜಪ್ಪನ ನಾಲ್ಕು ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿರುವುದನ್ನು ನಾನು ಈಗಾಗಲೇ ವಿದ್ವಾಂಸರ ಗಮನಕ್ಕೆ ತಂದಿದ್ದೇನೆ. ಜುಂಜಪ್ಪ ಕಾಡುಗೊಲ್ಲರಿಗಷ್ಟೇಮೀಸಲಾದ ದೇವರಾಗಿರದೆ ಕುರುಬ, ಬೇಡ ಮೊದಲಾದ ಜನಾಂಗಗಳವರೂ ಅವನನ್ನು ಆರಾಧಿಸುವುದಿದೆ. ಹಿರೇಮೈಲಾರ, ದೇವರಗುಡ್ಡ (ರಾಣೇಬೆನ್ನೂರು) ಕಾರೀಮನಿ, ದೇವರ ಶೀಗೆಹಳ್ಳಿ (ಬೈಲಹೊಂಗಲ ತಾ.) ದೇವಾಲಯಗಳಲ್ಲಿ ಪ್ರಚಲಿತವಿರುವ ಮೂರ್ತಿ ಐತಿಹ್ಯ, ಪುರಾಣ, ಆಚರಣೆಗಳ ಮೂಲಕ ಇದನ್ನು ಮನಗಾಣಬಹುದು.
ಇದೀಗ ಆತನ ಇನ್ನೊಂದು ದೇವಾಲಯ ಗೋಕಾಕ ತಾಲೂಕಿನ ‘ಬಗರನಾಳ’ ಗ್ರಾಮದಲ್ಲಿರುವುದು ಕಂಡು ಬಂದಿದೆ. ದಿ. ಬೆಟಗೇರಿ ಕೃಷ್ಣಶರ್ಮರ ಊರು ಬೆಟಗೇರಿಯಿಂದ ಪೂರ್ವಕ್ಕೆ ಸು. ೬ ಕಿ.ಮೀ.ಕಾಲುದಾರಿಯಲ್ಲಿ ಹೋದರೆ ಬಗರನಾಳ ಗ್ರಾಮ ಸಿಕ್ಕುತ್ತದೆ. ಊರ ಪಶ್ಚಿಮ ಬದಿಯಲ್ಲಿ ಹಳ್ಳವೊಂದು ಹರಿದಿದ್ದು ಇದರ ಬಲಬದಿ (ಪಶ್ಚಿಮ) ಯಲ್ಲಿ ಪ್ರಾಚೀನ ಕಾಲದ ಒಂದೊಂದು ಅಂಕಣದ ಶಿಲಾದೇವಾಲಯಗಳಿವೆ. ಹಾಳಾದ ದೊಡ್ಡ ದೇವಾಲಯವೊಂದು ಮೊದಲು ಈ ಪರಿಸರದಲ್ಲಿದ್ದ ಹಾಗೆ ಕಾಣುತ್ತದೆ. ಈಗಲೂ ಈ ಪರಿಸರದಲ್ಲಿ ಶಿವಲಿಂಗವೊಂದಿದೆ.
ಈ ಪ್ರದೇಶದಿಂದ ಮುಂದುವರಿದು ಹಳ್ಳದಾಟಿ ಕಾಲುದಾರಿಯ ಮೂಲಕ ಊರಲ್ಲಿ ಪ್ರವೇಶಿಸಿದರೆ ದಾರಿಯ ಬಲಬದಿ, ಪೂರ್ವಾಭಿಮುಖವಾದ ದೊಡ್ಡದೊಂದು ಗದ್ದಿಗೆ ಸಿಗುತ್ತದೆ. ಇದರ ಮೇಲೆ ಯಾವುದೇ ಛಾವಣಿ ಅಥವಾ ಸೂರು ಇಲ್ಲ. ಗದ್ದಿಗೆಗೆ ಸುತ್ತ ಎತ್ತವಾದ ಕಟ್ಟೆಯಿದ್ದು ಆಕಾಶಕ್ಕೆ ತೆರೆದುಕೊಂಡಂತೆ ದೇವರ ಸ್ಥಾನವಿದೆ. ಇದರ ಮಧ್ಯದಲ್ಲಿ ಒಂದೆರಡು ಕಲ್ಲು ಗುಂಡುಗಳಿದ್ದು ಅದರಲ್ಲಿನ ಒಂದು ದೊಡ್ಡ ಗುಂಡನ್ನೇ ಜುಂಜಪ್ಪನೆಂದು ಕರೆಯುತ್ತಾರೆ. ಈ ಸ್ಥಾನದ ಸುತ್ತ ಹುಣುಸೆ, ಬೇವು ಮೊದಲಾದ ದೊಡ್ಡಮರಗಳಿವೆ.
ಇಲ್ಲಿ ಜುಂಜಪ್ಪನ ಪೂಜಾರಿಗಳು ಜಾತಿಯಿಂದ ಕ್ಷತ್ರಿಯರು ಎಂದರೆ ಆಡು ನುಡಿಯಲ್ಲಿ ‘ಛತ್ರಿಯರು’. ಪ್ರಸ್ತುತ ಜುಂಜಪ್ಪನ ನಿತ್ಯ ಪೂಜೆಯಲ್ಲಿ ಅಂಥ ವಿಶೇಷವೇನೂ ಇಲ್ಲವೆಂದು ಹೇಳುತ್ತಾರೆ. ನೀರಿನಿಂದ ತೊಳೆದು ಅರಿಷಿಣ ಕುಂಕುಮ, ವಿಭೂತಿ ಹೂ ಏರಿಸಿದರೆ ಮುಗಿಯಿತು. ಈಗ ಜಾತ್ರೆ – ಉತ್ಸವಗಳಾವವೂ ನಡೆಯುತ್ತಿಲ್ಲ. ಪ್ರತಿವರ್ಷ ಯುಗಾದಿ ಪಾಡ್ಯದಂದು ಕುಲದೇವರೆಂದು ನಡೆದುಕೊಳ್ಳುವ ಒಕ್ಕಲಿನವರು ‘ಸೇವಗೆ’ಯೇ ಮೊದಲಾದ ನೈವೇದ್ಯ, ಹಣ್ಣು ಕಾಯಿ, ಕರ್ಪುರಗಳನ್ನು ಸಲ್ಲಿಸುತ್ತಾರೆ. ಮನೆಯಲ್ಲಿ ಲಗ್ನ ಮೊದಲಾದ ವಿಶೇಷ ಕಾರ್ಯಕ್ರಮಗಳಿದ್ದಾಗಲೂ ಇದೇ ಬಗೆಯ ಸೇವೆ ಸಲ್ಲಿಸುವ ಪರಿಪಾಠವಿದೆ.
ಪೂಜಾರಿಗಳಿಗೆ ಮೊದಲು ಉಂಬಳಿಯ ಹೊಲವಿದ್ದುದಾಗಿ ತಿಳಿದು ಬರುತ್ತದೆ. ಸಮೀಪದ ಕೌಜಲಗಿ ದೇಸಾಯರು ಕ್ಷತ್ರಿಯರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನುಳಿದಂತೆ ವಿಶಿಷ್ಟ ಆಚರಣೆಗಳಾಗಲೀ ಐತಿಹ್ಯ – ವದಂತಿಗಳಾಗಲೀ ಈ ಜುಂಜಪ್ಪನ ಬಗ್ಗೆ ಇದ್ದುದು ಕಂಡು ಬರುವುದಿಲ್ಲ.
No comments:
Post a Comment