Saturday, May 3, 2025

ಕಾವ್ಯದ ಔಷಧ ಗುಣ

  teluguwala       Saturday, May 3, 2025


ಈ ಬೆಳದಿಂಗಳ ಕವಿಗೋಷ್ಠಿಯ ಬಗ್ಗೆ ನಾನು ಕೇಳಿದ್ದೆ. ಸ್ವಾಮೀಜಿಯವರು ನನ್ನನ್ನು ಹಿಂದೆ ಕರೆದಿದ್ದರು. ನನಗೆ ಬಿಡುವಾಗಿರಲಿಲ್ಲ. ಇದರಲ್ಲಿ ಭಾಗವಹಿಸಿದವರು ತುಂಬಾ ಸಂತೋಷದಿಂದ ಅವರ ಅನುಭವಗಳನ್ನು ಹೇಳಿದ್ದು ಇದೆ. ನನಗದು ನಿಜವೆಂದು ಈಗ ಅನ್ನಿಸುತ್ತಿದೆ.

ಕನ್ನಡ ಕಾವ್ಯವನ್ನು ಕೇಳಿಸಿಕೊಳ್ಳಲು ಇಷ್ಟು ಜನ ಒಟ್ಟಿಗೆ ಸೇರುತ್ತಾರೆ ಎನ್ನುವುದು ಬಹಳ ಮುಖ್ಯವಾದ ವಿಷಯ. ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇದ್ದಾರೆ ಎಂದಾಗ ಒಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇಲ್ಲವೇ ಇಲ್ಲ, ಇದ್ದರೂ ಅವರು ಕೆಲವೇ ಕೆಲವು ಜನರಿರುತ್ತಾರೆ ಎಂದಾಗ ಇನ್ನೊಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಯಾರೂ ತನ್ನನ್ನು ಕೇಳಿಸಿಕೊಳ್ಳುವುದಿಲ್ಲ ಎನ್ನುವಂತ ಕಾಲದಲ್ಲಿ ಇಂಗ್ಲಿಷಿನಲ್ಲಿ ಬ್ಲೇಕ್ನಂಥವನು, ಹಾಪ್ಕಿನ್ಸ್- ನಂತವನು ಘನವಾದ, ಆಳವಾದ ಕಾವ್ಯವನ್ನು ಬರೆದದ್ದಿದೆ. ಜನ ಕೇಳಿದರೂ ಆಯಿತು. ಕೇಳದಿದ್ದರೂ ಆಯಿತು ಎಂದುಕೊಂಡಾಗಲೂ ಅಲ್ಲಮ ಬರೆದಂತಹ ಕಾವ್ಯ ಹುಟ್ಟಿಕೊಳ್ಳುವುದು ಸಾಧ್ಯ.
ಜನ ಉತ್ಸಾಹದಲ್ಲಿ ಕಾವ್ಯಕ್ಕೆ ಸ್ಪಂದಿಸುವುದು ಇಡೀ ಸಮುದಾಯದ ಆರೋಗ್ಯವನ್ನು ಸೂಚಿಸುತ್ತದೆ. ಅಪಾರವಾದ ಸಹೃದಯತೆಯ ನಿರೀಕ್ಷೆಯಲ್ಲಿ ಬಹಳ ದೊಡ್ಡ ಕಾವ್ಯ ಹುಟ್ಟಿಕೊಳ್ಳುವುದು ಸಾಧ್ಯ. ಕುವೆಂಪು ಮತ್ತು ಬೇಂದ್ರೆಯವರು ಭಿನ್ನ ಭಿನ್ನ ರೀತಿಯಲ್ಲಿ ಈ ಬಗೆಯ ಕಾವ್ಯವನ್ನು ಅಂದರೆ ಜನಾಭಿಮುಖವಾದ ಕಾವ್ಯವನ್ನು ಸೃಷ್ಟಿಸಿದರು. ಈ ಕವಿಗಳು ಮತ್ತು ಅನಂತರದಲ್ಲಿ ಗೋಪಾಲಕೃಷ್ಣ ಅಡಿಗರು ಆಗೀಗ ಏಕಾಕಿಯಾಗಿ ಭಾವಿಸಬೇಕಾಗಿ ಬಂದಾಗಲೂ ಅವರ ಕಾವ್ಯ ಶಕ್ತಿಯುತವಾಗಿ, ಸಂವಹನ ಸಾಧುವಾಗಿಯೇ ಉಳಿದಿತ್ತು. ಅವರು ಜನಾಭಿಮುಖರಾಗಿ ಇದ್ದಾಗಲೂ ಜನಪ್ರಿಯರಾಗಲು ತಮ್ಮ ಶಕ್ತಿಯನ್ನು ವ್ಯಯಮಾಡಿಕೊಳ್ಳಲಿಲ್ಲ.
ಎಪಿಕ್ ಎಂದು ಕರೆಯುವ ಮಹಾಕಾವ್ಯ ಹುಟ್ಟುವುದು ಕವಿ ಇಡೀ ಸಮುದಾಯದ ವಾಣಿ ಎನ್ನಿಸಿದಾಗ. ಕವಿ ಆಗ ತಾನೊಂದು ನೆಪ ಮಾತ್ರ ಎಂದು ತಿಳಿಯುತ್ತಾನೆ. ಲಿಪಿಕಾರ ಕುಮಾರವ್ಯಾಸ ಎನ್ನುವುದರ ಅರ್ಥ ಇದು. ‘ಕುವೆಂಪು ಸೃಜಿಸಿದೀ ರಾಮಾಯಣಂ’- ಅಂದರೆ ಕುವೆಂಪು ಸೃಷ್ಟಿಸಿದ ರಾಮಾಯಣವಲ್ಲ ಕುವೆಂಪುವನ್ನೇ ಸೃಷ್ಟಿಸಿದ ರಾಮಾಯಣ.
ಒಳ್ಳೆಯ ಕಾವ್ಯ ಜನಕ್ಕೆ ಅರ್ಥವಾಗುತ್ತಿದೆ ಎನ್ನಿಸಿದಾಗಲೂ, ಇನ್ನೂ ಅರ್ಥವಾಗಬೇಕಾದದ್ದು ಉಳಿದಿದೆ ಎನ್ನಿಸುವಂತಿರಬೇಕು. ಆದ್ದರಿಂದ ಯಾವುದು ಮತ್ತೆ ಮತ್ತೆ ಓದಬಲ್ಲಂತದ್ದೋ ಓದುತ್ತಾ ಹೋದಂತೆ ಹೊಸ ಅರ್ಥಗನ್ನು ಹುಟ್ಟಿಸಬಲ್ಲದ್ದೋ ಅದನ್ನೇ ಉತ್ತಮ ಕಾವ್ಯ ಎನ್ನಬಹುದು.
ನಾವು ಇವತ್ತು ಓದುತ್ತಿರುವುದು ಒಂದು ಗುರುಮಠದ ಆವರಣದಲ್ಲಿ. ಆದ್ದರಿಂದ ನಾನು ಹೇಳಬೇಕಾದ ಇನ್ನೂ ಒಂದು ಮಾತಿದೆ. ಎಲ್ಲ ಧರ್ಮಗಳು – ವೈದಿಕವಿರಲಿ, ಕ್ರೈಸ್ತ ಮತವಿರಲಿ, ಇಸ್ಲಾಂ ಇರಲಿ, ವೀರಶೈವ, ಜೈನ, ಬೌದ್ಧ ಯಾವುದೇ ಇರಲಿ-ಅವು ಉಳಿದಿರುವುದು ಧರ್ಮಗ್ರಂಥಗಳಲ್ಲಿ ಅಡಕವಾಗಿರುವ ಕಾವ್ಯಶಕ್ತಿಯಿಂದಾಗಿ. ಇಲ್ಲವಾದರೆ ಧರ್ಮಗಳು ಅವು ಹುಟ್ಟಿದ ಐತಿಹಾಸಿಕ ಕಾಲಕ್ಕೆ ಸೀಮಿತವಾಗಿ ಈ ಕಾಲಕ್ಕೆ ಗೊಡ್ಡಾಗಿಬಿಡುತ್ತಿದ್ದವು. ಇನ್ನೊಂದು ಮಾತನ್ನೂ ಇಲ್ಲಿ ಹೇಳಬೇಕು ಈ ಧರ್ಮಗ್ರಂಥಗಳನ್ನು ಅಕ್ಷರಶಃ ಅರ್ಥ ಮಾಡಿಕೊಂಡು ಓದುವವರು ಫಂಡಮೆಟಲಿಸ್ಟ್ ಆಗಿಬಿಡುತ್ತಾರೆ. ಆಡಂ ಮತ್ತು ಈವ್ ನಿಜವಾಗಿ ಇದ್ದರು, ಅವರಿಂದಲೇ ಈ ಪ್ರಪಂಚದ ಸೃಷ್ಟಿಯಾಯಿತು. ಡಾರ್ವಿನ್ ಹೇಳುವುದು ನಿಜವಲ್ಲ ಎನ್ನುವ ಮೂಢನಂಬಿಕೆ ಅವರನ್ನು ಆವರಿಸಿಬಿಡುತ್ತದೆ. ಆದರೆ ಯಾರು ವೇದಗಳನ್ನು, ಬೈಬಲ್ನ್ನು, ಕುರಾನ್ನ್ನು ಅದರ ರೂಪಕ ಭಾಷೆಯಲ್ಲಿ ತಿಳಿದು ಓದಿಕೊಳ್ಳುತ್ತಾರೋ ಅವರು ನಿಜವಾಗಿ ಧರ್ಮಕ್ಕೆ ಅಂದರೆ ಅದರ ಒಳತಿರುಳಿಗೆ ಸ್ಪಂದಿಸುತ್ತಾರೆ.
ಆದ್ದರಿಂದ ಶ್ರೀಗಳು ಇಂತಹ ಒಂದು ಮಠದ ಆವರಣದಲ್ಲಿ ಕಾವ್ಯಕ್ಕೆ ಇಷ್ಟು ದೊಡ್ಡ ಬೆಲೆಯನ್ನು ಕೊಟ್ಟಿರುವುದು ಅತ್ಯಂತ ಸಕಾಲಿಕವಾದ್ದು ಮತ್ತು ಸಮರ್ಪಕವಾದ್ದು ಎಂದು ತಿಳಿದಿದ್ದೇನೆ. ಇಡೀ ವೀರಶೈವ ಧರ್ಮ ಉಳಿದಿರುವುದು ವಚನಕಾರರ ಕಾವ್ಯ ಶಕ್ತಿಯಿಂದ. ಈ ಕಾವ್ಯಶಕ್ತಿ ಎನ್ನುವುದು ಮಾವಿನ ಮಿಡಿ ಹಾಳಾಗಗೊಡದಂತೆ ಸವರುವ ಉಪ್ಪಿನ ಹಾಗೆ.

ಜನರಿಗೆ ಕಾವ್ಯ ಪ್ರಿಯವಾಗುವುದು ಸಮುದಾಯದ ಆರೋಗ್ಯಕ್ಕೆ ಎಷ್ಟು ಅಗತ್ಯ, ಮತ್ತು ಅದು ಆರೋಗ್ಯದ ದ್ಯೋತಕ ಎನ್ನುವ ಮಾತನ್ನು ಹೇಳಿದೆ. ಇದರ ಜೊತೆಗೆ ಒಂದು ಎಚ್ಚರಿಕೆಯ ಮಾತನ್ನೂ ನಮಗೆ ನಾವು ಹೇಳಿಕೊಳ್ಳಬೇಕು. ಒಮ್ಮೊಮ್ಮೆ ಕಾವ್ಯ ಸಾಮಾಜಿಕ ಸ್ತರದಲ್ಲಿ ಹೌದೆನ್ನಿಸಿಕೊಳ್ಳುವ ಮಟ್ಟಕ್ಕೆ ಇಳಿದುಬಿಡುವುದಿದೆ. ಆದರೆ ಶಕ್ತಿಯುತವಾದ ಕಾವ್ಯ ಸಾಮಾಜಿಕವಾಗಿ ನಮಗೆ ಅಪ್ರಿಯವಾದದ್ದನ್ನು ಹೇಳುವ ಶಕ್ತಿಯನ್ನು ಪಡೆದಿರುತ್ತದೆ. ವಚನಕಾರರಲ್ಲಿ ಆ ಶಕ್ತಿಯಿತ್ತು. ನಾವು ಭಾವಿಸಲು ಹೆದರುವ ಹಲವು ಸತ್ಯಗಳು ರೂಪಕಗಳಾಗಿ ಹೊರಹೊಮ್ಮುವುದುಂಟು. ಎಲ್ಲಾ ದೊಡ್ಡ ಕವಿಗಳಲ್ಲೂ ಈ ಬಗೆಯ ಶಕ್ತಿ ಇರುತ್ತದೆ. ನಾವು ಈ ಶಕ್ತಿಯನ್ನು ನಮ್ಮ ಒಳ ಬಾಳಿನಲ್ಲಿ ಮೌನವಾಗಿ ಕಂಡುಕೊಳ್ಳಬೇಕಾಗುತ್ತದೆ. ಹಲವು ಅಪ್ರಿಯ ಸತ್ಯಗಳನ್ನು ಎದುರಿಸುತ್ತಲೇ ಮಾಗಬೇಕಾದರೆ ನಮ್ಮಂತಹ ಮನುಷ್ಯರಿಗೆ ಸಾಹಿತ್ಯದ ಈ ಔಷಧ ಗುಣ ಬಹಳ ಅಗತ್ಯವಾಗಿರುತ್ತದೆ.

ಈ ಕವಿಗೋಷ್ಠಿಯಲ್ಲಿ ಕಾವ್ಯದ ಹಲವು ಮುಖಗಳು ಸಾಕ್ಷಾತ್ಕಾರ ಆಗಬಹುದೆಂದು ಭಾವಿಸಿ ಈ ಕವಿಗೋಷ್ಠಿಯನ್ನು ಉದ್ಘಾಟನೆ ಮಾಡುತ್ತಿದ್ದೇನೆ.

ಬೆಂಗಳೂರಿನ ಮುರುಘಾಮಠದಲ್ಲಿ ಮಾಡಿದ ಬೆಳದಿಂಗಳ ಕವಿಗೋಷ್ಠಿಯ ಉದ್ಘಾಟನಾ ಭಾಷಣ.
logoblog

Thanks for reading ಕಾವ್ಯದ ಔಷಧ ಗುಣ

Previous
« Prev Post

No comments:

Post a Comment