Sunday, May 4, 2025

ನಾಥಪಂಥ ಮತ್ತು ಸ್ಥಳೀಯ ಜೋಗಿ ಸಂಪ್ರದಾಯ

  teluguwala       Sunday, May 4, 2025


ದಕ್ಷಿಣ ಕನ್ನಡದ ಕದ್ರಿ, ವಿಟ್ಲ ಮುಂತಾದಡೆಗಳಲ್ಲಿರುವ ನಾಥಪಂಥದ ಮಠಗಳಿಗೆ ಅಧಿಪತಿಗಳಾಗಿರುವವರು ಉತ್ತರ ಭಾರತದ ನಾಥ ಯೋಗಿಗಳು. ಆದರೆ ಬಹಳ ಹಿಂದಿನಿಂದಲೇ ನಾಥಪಂಥದ ಪ್ರಭಾವಕ್ಕೊಳಗಾಗಿ ಮಠಕ್ಕೆ ಭಕ್ತಿ ಪೂರ್ವಕ ನಡೆದುಕೊಳ್ಳುವ ಸ್ಥಳೀಯ ಜನ ಸಮುದಾಯದವರಿದ್ದಾರೆ. ಇವರನ್ನು “ಜೋಗಿ”ಗಳು, “ಜೋಗಿಪುರುಷ”ರು ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಕದ್ರಿ, ವಿಟ್ಲ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿ ಈ ಜನ ಸಮುದಾಯವನ್ನು ನಾವಿಂದು ಕಾಣಬಹುದು. ಅಂಥವರಲ್ಲಿ ಕೆಲವರು ವಾದ್ಯ ನುಡಿಸುವ ಕಲೆಯಲ್ಲಿ ಪರಿಣತರಾಗಿದ್ದಾರೆ. ಇವರಲ್ಲಿ ತುಳು ಹಾಗೂ ಮರಾಠಿ [1]ಮಾತನಾಡುವ ಎರಡು ಪಂಗಡಗಳಿವೆ.

ಭೈರವ ಅವರ ಪ್ರಮುಖ ದೇವರಾಗಿದ್ದರೂ, ಕೆಲವರು ಗೋರಕ್ಷನಾಥನೇ ತಮ್ಮ ದೇವರೆಂದು ಹೇಳುತ್ತಾರೆ. ಎಂತಿದ್ದರೂ ನಾಥ ಪಂಥದೊಂದಿಗೆ ಇವರಿಗಿರುವ ಧಾರ್ಮಿಕ ಸಂಬಂಧ ಇದರಿಂದ ವ್ಯಕ್ತವಾಗುತ್ತದೆ. ಅವರ ಪೂಜಾರಿಗಳು ಅವರಿಗೆ “ಭೈರವಪಂಥ” (ನಾಥಪಂಥ)ದ ದೀಕ್ಷೆಯನ್ನು ಕೊಡುತ್ತಾರೆ. ಅವರು ಬ್ರಹ್ಮಚರ್ಯೆ ಅಥವಾ ವೈವಾಹಿಕ ಜೀವನವನ್ನು ನಡೆಸಬಹುದು. ಬ್ರಹ್ಮಚಾರಿಗಳಾದವರು ಕಿವಿಯಲ್ಲಿ ಸಣ್ಣ ತೂತನ್ನು ಹೊಂದಿದ್ದು ಖಡ್ಗಮೃಗದ ಕೊಂಬಿನಿಂದ ಅಥವಾ ಪಿಂಗಾಣಿ ಮಣ್ಣಿನಿಂದ ತಯಾರಿಸಿದ ಉಂಗುರವನ್ನು ಕಿವಿಯಲ್ಲಿ ಧರಿಸುತ್ತಾರೆ. ವೈವಾಹಿಕ ಜೀವನವನ್ನು ನಡೆಸುವ ಇಚ್ಛೆಯುಳ್ಳವರು ಕಿವಿ ಮಧ್ಯದಲ್ಲಿ ತೂತನ್ನು ಮಾಡಿಕೊಳ್ಳಬೇಕಾಗಿಲ್ಲ. ಆದರೆ ದೀಕ್ಷೆ ಪಡೆಯುವ ಸಂದರ್ಭದಲ್ಲಿ ಕಿವಿಯ ಮಧ್ಯಭಾಗಕ್ಕೆ ಪಿಂಗಾಣಿ ಮಣ್ಣಿನಿಂದ ಒತ್ತುವ ಸಂಪ್ರದಾಯವಿದೆ. ತಮ್ಮ ಪಂಥದ ಅನುಯಾಯಿಗಳಾಗಬಯಸುವ ಎಲ್ಲ ಜೋಗಿ ಪುರುಪರೂ ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿಯಿಂದ ತಯಾರಿಸಿದ ತುತ್ತೂರಿಯನ್ನು ತಮ್ಮ ಕೊರಳಿಗೆ ಕಟ್ಟಿಕೊಂಡಿರಬೇಕು. ಅದನ್ನು, ‘ಸಿಂಗನಾದ’ ಎಂದು ಕರೆಯುತ್ತಾರೆ. ಊಟ ಮಾಡುವ ಮೊದಲು ಅವರು ಭೈರವನನ್ನು ಪ್ರಾರ್ಥಿಸಿ. ‘ಸಿಂಗಿನಾಥ’ವನ್ನು ಮೊಳಗುತ್ತಾರೆ.


ಜೋಗಿಪುರುಷರು ತಮ್ಮ ಮದುವೆ ಸಮಾರಂಭಗಳಿಗೆ ಪುರೋಹಿತರನ್ನಾಗಿ ಕರ್ಹಾಡ(ಮರಾಠಿ) ಬ್ರಾಹ್ಮಣರನ್ನು ಕರೆಯುತ್ತಾರೆ. ಸತ್ತವರನ್ನು ಕುಳಿತ ಭಂಗಿಯಲ್ಲಿ ಹೂಳುತ್ತಾರೆ. ೧೨ನೆಯ ದಿನ ಅಂತ್ಯಸಂಸ್ಕಾರಕ್ಕೆ ಕರ್ಹಾಡ ಬ್ರಾಹ್ಮಣರೇ ಪುರೋಹಿತರಾಗಿರುತ್ತಾರೆ. ಒಂದು ಮೇಳೆ ಮೃತ ವ್ಯಕ್ತಿ ಭೈರವ ಪಂಥದ ದೀಕ್ಷೆ ಪಡೆದುಕೊಂಡಿದ್ದರೆ ಹನ್ನೆರಡು ದಿನಗಳವರೆಗೂ ದಿನ ಬಿಟ್ಟು ದಿನ ಅವನ ಸಮಾಧಿಯ ಬಳಿ ಪೂಜೆ ನಡೆಸಬೇಕು.


ಕರ್ನಾಟಕದ ಇತರೆಡೆಗಳಲ್ಲಿ “ಕಿನ್ನರಿ (ಕಿಂದರಿ) ಜೋಗಿ”ಗಳೆಂಬ ವೃತ್ತಿಗಾಯಕ ಸಂಪ್ರದಾಯದವರಿದ್ದಾರೆ. ಅವರು ಬಣ್ಣಬಣ್ಣದ ವಿಶಿಷ್ಟ ವೇಷಭೂಷಣಗಳನ್ನು ತೊಟ್ಟು, ಊರೂರು ತಿರುಗುತ್ತಾರೆ. ಕಿನ್ನರಿ ನುಡಿಸುತ್ತಾ ‘ಅರ್ಜುನ ಜೋಗಿ’ ಹಾಗೂ ಇತರ ಮಹಾಭಾರತ ಕಥೆಗಳನ್ನು ಹಾಡುತ್ತಾರೆ. ನಾಥ ಪಂಥದ ಪ್ರಭಾವಕ್ಕೆ ಇವರು ಒಳಗಾಗಿರಬೇಕು. ಯಾಕೆಂದರೆ ಧಾರ್ಮಿಕವಾಗಿ ಅವರಿಗೆ ಕದ್ರಿಯೊಂದಿಗೆ ಸಂಬಂಧವಿದ್ದಂತಿದೆ. ಅವರು ಹೇಳುವ ಪ್ರಕಾರ ಕಾಲಕಾಲಕ್ಕೆ ಅವರು ಕದ್ರಿಮಠಕ್ಕೆ ಹೋಗಿಬರುತ್ತಾರೆ.


ನಾಥ ಸಂಪ್ರದಾಯದ ಮಠಕ್ಕೆ ವಿಶೇಷವಾಗಿ ನಡೆದುಕೊಳ್ಳುವ ಜೋಗಿ ಸಮುದಾಯದವರಲ್ಲಿ ಸ್ಥಳೀಯವಾಗಿ ನರಸಣ್ಣ ಜೋಗಿ, ವಾದ್ಯ ಜೋಗಿ (ಜೋಗಿ ಪುರುಷರು) ಮುಂತಾದ ಉಪಜಾತಿಗಳಿವೆ. ಇವರಲ್ಲದೆ ಸ್ಥಳೀಯ ಮೀನುಗಾರ (ಮೊಗವೀರ – ಮರಕ್ಕೆಲ) ರೂ ಜೋಗಿ ಮಠದೊಂದಿಗೆ ಧಾರ್ಮಿಕ ಸಂಬಂಧವನ್ನು ಹೊಂದಿದ್ದಾರೆ. ಕದ್ರಿಯ ಮಠವನ್ನು ಅವರು ಗುರುಮಠವೆಂದು ಪರಿಗಣಿಸುತ್ತಾರೆ. ಇಲ್ಲಿಯ ಮಠಾದಿಪತಿಗಳನ್ನು ವರ್ಷಕ್ಕೊಮ್ಮೆ ಸ್ಥಳೀಯ ಮೀನುಗಾರ ಸಮುದಾಯದವರು ಸಮುದ್ರ ಪೂಜೆಗಾಗಿ ಬ್ಯಾಂಡು – ವಾಲಗದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯುವ ಸಂಪ್ರದಾಯವಿದೆ. ಈ ಮೆರವಣಿಗೆಯನ್ನು ‘ಗೋಯ್ ದಂಡು’ ಎಂಬುದಾಗಿ ಕರೆಯುತ್ತಾರೆ. ಕೆಲವರು ಈ ಸಮುದ್ರಪೂಜೆಗೆ ಪರಶುರಾಮ ಸೃಷ್ಟಿ ಪುರಾಣದ ಸಂಬಂಧವನ್ನು ಕಲ್ಪಿಸುತ್ತಾರೆ. ಕದ್ರಿಯ ಜೋಗಿ ಮಠದ ಎದುರುಗಡೆಯಿರುವ ಪರಶುರಾಮನಕಟ್ಟೆಯಲ್ಲಿ ನಿಂತು ಪರಶುರಾಮನು ತನ್ನ ಬೆರಳ ಸಂಕೇತ ಮಾತ್ರದಿಂದ ಸಾಗರವನ್ನು ಹಿಂದಕ್ಕೆ ಸರಿಸಿದನೆಂಬ ಪುರಾಣವನ್ನು ಪ್ರಸ್ತುತ ಸಮುದ್ರಪೂಜೆಯೊಂದಿಗೆ ತಳುಕು ಹಾಕಲಾಗುತ್ತದೆ. ನಾಥ ಸಂಪ್ರದಾಯದ ಝಂಡಿಯ ಪ್ರವರ್ತಕನು ಪರಶುರಾಮನೆಂಬ ನಂಬಿಕೆಯಿರುವುದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ನಾಥ ಯೋಗಿಗಳಿಗೂ ಸಮುದ್ರ ಪೂಜೆಗೂ ಇರುವ ಸಂಬಂಧವನ್ನು ಈ ರೀತಿ ವ್ಯಾಖ್ಯಾನಿಸಿಕೊಂಡರೆ, ಮೀನುಗಾರರಿಗೂ ನಾಥ ಯೋಗಿಗಳಿಗೂ (ಮಠಕ್ಕೂ ಇರುವ ಸಂಬಂಧವನ್ನು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಿಕೊಳ್ಳಬಹುದಾಗಿದೆ. ಮತ್ಸ್ಯೇಂದ್ರನಾಥನೆಂಬ ನಾಥ ಸಂತನೂ ಗೋರಕ್ಷನಾಥನೊಂದಿಗೆ ಕದ್ರಿಗೆ ಬಂದಿದ್ದುದಾಗಿ ಐತಿಹ್ಯ – ಪುರಾಣಗಳಿಂದ ತಿಳಿದುಬರುತ್ತದೆ. ಇಲ್ಲಿ “ಮತ್ಸ್ಯೇಂದ್ರನಾಥ” ಹೆಸರಲ್ಲಿರುವ “ಮತ್ಸ್ಯ” ಪದದೊಂದಿಗೆ ಸಂಬಂಧ ಕಲ್ಪಿಸಿ ಬೆಸ್ತ ಸಮುದಾಯದವರು ಯೋಗೀಶ್ವರ ಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿರಬಹುದಾದ ಸಾಧ್ಯತೆ ಇದೆ. ಬೆಸ್ತರು ನಾಥ ಯೋಗಿಗಳನ್ನು ವೈಭವದಿಂದ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ, ಅವರಿಂದಲೇ ಸಮುದ್ರಪೂಜೆ ಮಾಡಿಸುತ್ತಾರೆ. ಹೆಚ್ಚು ಮೀನು ದೊರಕುವಂತೆ ಪ್ರಾರ್ಥನೆ ಸಲ್ಲಿಸಿ, ಸಮುದ್ರಕ್ಕೆ ಹಾಲನ್ನೆರೆಯುತ್ತಾರೆ. ಈ ಕ್ರಿಯಾಚರಣೆಯ ಹಿಂದೆ ವಿಶಿಷ್ಟವಾದ ಪೌರಾಣಿಕ ನಂಬಿಕೆಯಿರುವುದು ಸ್ಪಷ್ಟವಾಗುತ್ತದೆ.

logoblog

Thanks for reading ನಾಥಪಂಥ ಮತ್ತು ಸ್ಥಳೀಯ ಜೋಗಿ ಸಂಪ್ರದಾಯ

Previous
« Prev Post

No comments:

Post a Comment