Monday, May 5, 2025

ಬೆಳಗಾವಿ ಜಿಲ್ಲೆಯ ಕನ್ನಡ

  teluguwala       Monday, May 5, 2025


ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಇದರ ಪಶ್ಚಿಮೋತ್ತರ ಗಡಿ, ಮಹಾರಾಷ್ಟ್ರದೊಂದಿಗೆ ಹೊಂದಿಕೊಂಡಿದೆ. ಮರಾಠರ ಹಲವಾರು ಸಂಸ್ಥಾನಗಳು ಬೆಳಗಾವಿ ಜಿಲ್ಲೆಯಲ್ಲಿ ಇದ್ದುದರಿಂದ ಮರಾಠಿಯು ಬೆಳಗಾವಿ ಜಿಲ್ಲೆಯ ಕನ್ನಡದ ಮೇಲೆ ಪ್ರಭಾವ ಬೀರಿದುದು ಸಹಜವಾಗಿದೆ. ಈಗಲೂ ಬೆಳಗಾವಿ, ಖಾನಾಪುರ ಹಾಗೂ ಚಿಕ್ಕೋಡಿ ತಾಲೂಕುಗಳಲ್ಲಿ ಮರಾಠಿ ಮಾತನಾಡುವವರು ವಿಶೇಷ ಸಂಖ್ಯೆಯಲ್ಲಿದ್ದಾರೆ. ಬೆಳಗಾವಿಯ ಬಗೆಗೆ ಇರುವ ವಾದವಂತೂ ಜನಜನಿತವಾಗಿದೆ.


ಮರಾಠಿಗರಲ್ಲದೆ ಭಾಷಾ ಅಲ್ಪಸಂಖ್ಯಾತರಾಗಿ ಮುಸಲ್ಮಾನರು, ಪಟ್ಟೆಗಾರರು, ಕೊರವರು, ಲಮಾಣಿಗಳು, ಗೊಲ್ಲರು, ವಡ್ಡರು ಈ ಜಿಲ್ಲೆಯಲ್ಲಿದ್ದಾರೆ. ಮರಾಠಿಯ ಪ್ರಭೇದವೊಂದನ್ನಾಡುವ ಗೌಳಿಗರು ಖಾನಾಪೂರ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿದ್ದಾರೆ. ಇತ್ತಿತ್ತಲಾಗಿ ವಲಸೆಬಂದ ಮಾರವಾಡಿಗಳು, ಗುಜರಾತಿಗಳು, ಸಿಂಧಿಗಳು ಕೆಲಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಬೆಳಗಾವಿ ನಗರದಲ್ಲಿ ಕೊಂಕಣಿಗಳ ಸಂಖ್ಯೆಯೂ ಗಮನಾರ್ಹವಾಗಿದೆ.


ಬೆಳಗಾವಿ ಜಿಲ್ಲೆಯ ಕನ್ನಡದಲ್ಲಿ ಪ್ರಮುಖವಾದ ನಾಲ್ಕು ಪ್ರಭೇದಗಳನ್ನು ಗುರುತಿಸಬಹುದು. ೧.ಬೈಲಹೊಂಗಲ ಕನ್ನಡ ೨. ಗಡಿ ಕನ್ನಡ ೩. ಗೋಕಾಕ ಕನ್ನಡ ೪. ರಾಮದುರ್ಗ ಕನ್ನಡ.
೧.ಬೈಲಹೊಂಗಲ ಕನ್ನಡ : ಇದರಲ್ಲಿ ಬೆಳಗಾವಿ ತಾಲೂಕಿನ ಬಾಗೆವಾಡಿ ವಿಭಾಗ. ಖಾನಾಪೂರ ತಾಲೂಕಿನ ಉತ್ತರ-ಪಶ್ಚಿಮ ಭಾಗ ಹೊರತುಪಡಿಸಿ ಉಳಿದ ಭಾಗ, ಬೈಲಹೊಂಗಲ ತಾಲೂಕು, ಸವದತ್ತಿ ತಾಲೂಕಿನ ಬಹು ಭಾಗಗಳು ಸಮಾವೇಶವಾಗುತ್ತವೆ.


೨.ಗಡಿ ಕನ್ನಡ :ಇದು ಮಹಾರಾಷ್ಟ್ರದ ಗಡಿಯ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇದರ ಮೇಲೆ ಆರ್ಯಭಾಷೆಯಾದ ಮರಾಠಿಯ ಪ್ರಭಾವ ವಿಶೇಷವಾಗಿದೆ. ಬೆಳಗಾವಿ ತಾಲೂಕಿನ ಬೆಳಗಾವಿ ನಗರ ಹಾಗೂ ಉತ್ತರಭಾಗ, ಬಾಗೇವಾಡಿ ಭಾಗವನ್ನು ಹೊರತುಪಡಿಸಿ ಉಳಿದ ಪೂರ್ವಭಾಗ, ಹುಕ್ಕೇರಿ ತಾಲೂಕಿನ ಪಶ್ಚಿಮ ಮತ್ತು ಉತ್ತರಭಾಗ, ಚಿಕ್ಕೋಡಿ ತಾಲೂಕು-ಇವು ಗಡಿ ಕನ್ನಡದಲ್ಲಿ ಸಮಾವೇಶಗೊಳ್ಳುತ್ತವೆ. ರಾಯಬಾಗ ತಾಲೂಕಿನ ಉತ್ತರಭಾಗ ಹಾಗೂ ಅಥಣಿ ತಾಲೂಕುಗಳಲ್ಲಿಯ ಕನ್ನಡವು ಗಡಿಕನ್ನಡದೊಡನೆ ವಿಶೇಷ ಸಾಮ್ಯವುಳ್ಳದಾಗಿದ್ದರೂ ವಿಜಾಪೂರ ಕನ್ನಡದ ಪ್ರಭಾವವೂ ಇಲ್ಲಿ ಕಂಡುಬರುತ್ತದೆ.


೩. ಗೋಕಾಕ ಕನ್ನಡ: ಇದರಲ್ಲಿ ಗೋಕಾಕ ತಾಲೂಕು, ಹುಕ್ಕೇರಿ ತಾಲೂಕಿನ ದಕ್ಷಿಣ ಮತ್ತು ಪೂರ್ವಭಾಗಗಳು ಸಮಾವೇಶಗೊಳ್ಳುತ್ತವೆ.


೪. ರಾಮದುರ್ಗ ಕನ್ನಡ : ಇದರಲ್ಲಿ ಸವದತ್ತಿ ತಾಲೂಕಿನ ಪೂರ್ವಭಾಗ, ರಾಮದುರ್ಗ ತಾಲೂಕುಗಳು ಸೇರುತ್ತವೆ. ಇಲ್ಲಿ ಬಾಗಲುಕೋಟೆ, ಬಾದಾಮಿಗಳ ಕನ್ನಡ ಪ್ರಭಾವ ಬೀರಿದೆ. ಗಡಿ ಕನ್ನಡದ ಹೊರತು ಉಳಿದ ಭಾಗಗಳಲ್ಲಿ ಭಾಷಿಕ ವೈದೃಶ್ಯಗಳು ಕಡಿಮೆ. ಗಡಿ ಕನ್ನಡದಲ್ಲಿ ಮರಾಠಿ ಪ್ರಭಾವ ಎದ್ದುಕಾಣುತ್ತದೆ. ಅಲ್ಲದೆ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಅದು ಬೆಳಯಿಸಿಕೊಂಡುಬಂದಿದೆ.
ಪ್ರದೇಶಾನುಸಾರ ಆಯಾ ಪ್ರಭೇದಗಳ ಪ್ರಭಾವ ತೋರಬಹುದಾದರೂ ಒಟ್ಟಿನಲ್ಲಿ ಈ ಜಿಲ್ಲೆಯ ಬ್ರಾಹ್ಮಣರ ಕನ್ನಡ ಇತರರಿಗಿಂತ ಬೇರೆಯಾಗಿದೆ.


ಈ ಲೇಖನದಲ್ಲಿ ಮೇಲಿನ ಪ್ರಭೇದಗಳನ್ನು ಕ್ರಮವಾಗಿ ಬೈಲಹೊಂಗಲ ಕನ್ನಡ (ಬೈ), ಗಡಿಕನ್ನಡ (ಗ), ಗೋಕಾಕ ಕನ್ನಡ (ಗೋ), ರಾಮದುರ್ಗ ಕನ್ನಡ (ರಾ), ಬ್ರಾಹ್ಮಣ ಕನ್ನಡ (ಬ್ರಾ) ಎಂದು ಸಂಕೇತಿಸಲಾಗುವುದು.


ಸ್ವರಗಳು:
ǝ, a, ae, i, e, u, o, c ಎಂಬ ಎಂಟು ಸ್ವರಗಳು ಕಂಡುಬರುತ್ತವೆ. ಇವುಗಳಲ್ಲಿ
[o] ಮತ್ತು [c] ಗಳನ್ನು ಪ್ರತ್ಯೇಕವಾದ ಧ್ವನಿಮಾಗಳೆಂದು ಹೇಳಲು ಸಾಧ್ಯವಾಗುವಂತಹ ಕನಿಷ್ಠಯುಗ್ಮಗಳು ದೊರೆಯುವುದಿಲ್ಲ. [c], [o:] ಮತ್ತು [c:] ಈ ಮೂರೂ ವೈದೃಶ್ಯ ಪ್ರಸಾರ ಪಡೆದಿದ್ದು ಪ್ರತ್ಯೇಕ ಧ್ವನಿಮಾಗಳೆಂದು ಹೇಳಲು ಸಾಧ್ಯ ವಾಗುವಂಥ ಕನಿಷ್ಠಯುಗ್ಮಗಳಲ್ಲಿ ಬರುತ್ತವೆ.
ಇನ್ನುಳಿದ ಆರೂ ಸ್ವರಗಳ ದೀರ್ಘತೆಯು ಧ್ವನಿಮಾ ಬೆಲೆಯುಳ್ಳದ್ದಾಗಿದೆ. a, ಸ್ವರಕ್ಕೆ ಮಾತ್ರ ಹೆಚ್ಚಿನ ಕನಿಷ್ಠಯುಗ್ಮಗಳಿಲ್ಲ.

 ಬೆಳಗಾವಿ ಜಿಲ್ಲೆಯ ಪ್ರಭೇದಗಳಲ್ಲಿ [c] ಹ್ರಸ್ವಸ್ವರವು ಸಾಮಾನ್ಯವಾಗಿದ್ದು [o] ಕ್ವಚಿತ್ತವಾಗಿದೆ. ಈ [c] ಸ್ವರವು ಒ ಸ್ವರದಿಂದಲೇ ನಿಷ್ಪನ್ನವಾದುದೆಂಬಲ್ಲಿ ಸಂದೇಹವಿಲ್ಲ. ಇಂದು ಬರಹ ಕನ್ನಡದಲ್ಲಿ ಒಕಾರವಿರುವ ಕಡೆಗಳಲ್ಲೆಲ್ಲ ಇಲ್ಲಿಯ ಪ್ರಭೇದಗಳಲ್ಲಿ [c] ಸ್ವರವೇ ಕಂಡುಬರುತ್ತದೆ. ಆದರೆ (ಬರಹ ಕನ್ನಡದಲ್ಲಿ) ಪವರ್ಗ ವ್ಯಂಜನದ ಮುಂದೆ ಇರುವ ಒ ಓಕಾರಗಳು ಈ ಪ್ರಭೇದಗಳಲ್ಲಿ ಶುದ್ಧವಾಗಿ ಕೇಂದ್ರ ವಿವೃತಸ್ವರಗಳಾಗಿರುವುದೂ ಅಷ್ಟೇ ಸಾಮಾನ್ಯ.

ಈ ಪ್ರಭೇದಗಳಲ್ಲಿ ವಕಾರವು ದಂತೋಷ್ಠ್ಯವಾಗಿರದೆ ಉಭಯೋಷ್ಠ್ಯವಾಗಿದೆ. ಸಾಮಾನ್ಯವಾಗಿ ನ್, ಣ್ ಗಳಲ್ಲಿ ವ್ಯತ್ಯಾಸ ತೋರಿಬಂದಿರುವುದಿಲ್ಲ. ಆಗೀಗ ತೋರಿ ಬರುತ್ತಿದ್ದರೆ ಗಡಿ ಹಾಗೂ ಬ್ರಾಹ್ಮಣ ಕನ್ನಡದಲ್ಲಿ ಮಾತ್ರ.


ರ್, ಲ್ ಗಳು ಇಲ್ಲಿ ವರ್ತ್ಸ್ಯವಾಗಿವೆ. ಇದೇ ರೀತಿ ಪರದಲ್ಲಿ ದಂತ್ಯ ವ್ಯಂಜನಗಳಾದ ತ, ದ ಗಳಿದ್ದಾಗ ನಕಾರವು ದಂತ್ಯವಾಗಿಯೂ ಉಳಿದ ಪರಿಸರಗಳಲ್ಲಿ ವರ್ತ್ಸ್ಯವಾಗಿಯೂ ಉಚ್ಚರಿಸಲ್ಪಡುತ್ತದೆ.
ಗಡಿ ಕನ್ನಡವನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಪಶ್ಚಸ್ವರಗಳು ಪರದಲ್ಲಿದ್ದಾಗ ಪದಾದಿ ಚ, ಜ ಗಳಿಗೆ ದಂತ್ಯೋಚ್ಚಾರವೂ ಉಳಿದ ಸ್ವರಗಳಿದ್ದಾಗ ತಾಲವ್ಯೋಚ್ಚಾರವೂ ಇರುತ್ತದೆ. ಪದಮಧ್ಯದಲ್ಲಿ ಪೂರ್ವಸ್ವರಗಳ ಹೊರತು ಬೇರೆ ಸ್ವರಗಳಿದ್ದಾಗ ದಂತ್ಯೋಚ್ಚಾರ ಹಾಗೂ ಪೂರ್ವಸ್ವರಗಳಿದ್ದಾಗ ತಾಲವ್ಯೋಚ್ಚಾರ ಇರುತ್ತದೆ.


ಗಡಿ ಕನ್ನಡದಲ್ಲಿ ಎಲ್ಲ ಸ್ಥಾನಗಳಲ್ಲಿ ಪೂರ್ವಸ್ವರಗಳು ಪರದಲ್ಲಿದ್ದಾಗ ಮಾತ್ರ ತಾಲವ್ಯೋಚ್ಚಾರವಿರುತ್ತದೆ.


ಈ ಪ್ರಭೇದಗಳಲ್ಲಿ ಶಕಾರವು ಕ್ವಚಿತ್ತಾಗಿ ಪ್ರಯೋಗಗೊಳ್ಳುವುದು ಕಂಡು ಬರುತ್ತದೆ.

logoblog

Thanks for reading ಬೆಳಗಾವಿ ಜಿಲ್ಲೆಯ ಕನ್ನಡ

Newest
You are reading the newest post

No comments:

Post a Comment