ಶೆಟ್ಟಿ ಅಥವಾ ಕೋಮಟಿಗಳೆಂದು ಪರಿಚಿತವಾಗಿರುವ ವೈಶ್ಯರು, ತುಪ್ಪದಕೋಮಟಿ ಮತ್ತು ಎಣ್ಣೆ ಕೋಮಟಿಗಳೆಂಬ ಎರಡು ಉಪಪಂಗಡಗಳನ್ನು ಹೊಂದಿದ್ದಾರೆ. ಐಯ್ಯರ್ (೧೯೩೦) ಬರೆಯುವಂತೆ ಕೋಮಟಿಗಳು ತಾವು ಪ್ರಾಚೀನ ವೈಶ್ಯ ಪಂಗಡದ ಪ್ರತಿನಿಧಿಗಳೆಂದು ಹೇಳುತ್ತಾರೆ. ಇವರು ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಋಷಿಗಳ ಹೆಸರಿನಲ್ಲಿ ನೂರ ಎರಡಕ್ಕೂ ಹೆಚ್ಚಿನ ಗೋತ್ರಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗುರುತಿಸಲಾಗಿದೆ. ಪ್ರಭಾತ ಮಹರ್ಷಿ, ಪ್ರಭಾತಸ, ಮಾಂಡವ್ಯ ಮಹರ್ಷಿ ಅಂಗೀರಸ ಮಹರ್ಷಿ, ಗೋಪಕ ಮಹರ್ಷಿ, ಪೂತಿಮಾಷ ಮಹರ್ಷಿ, ಶ್ರೀ ವತ್ಸಮಹಾಮನಿ, ಕಣ್ಣಾಯ ಮಹರ್ಷಿ, ಕಂದರ್ಪ ಮಹರ್ಷಿ, ದಾಲುಭ್ಯ ಮಹರ್ಷಿ, ದೇವಲ್ಕ್ಯ ಮಹರ್ಷಿ, ಮೈತ್ರೇಯ ಮಹರ್ಷಿ, ಸನಕ ಮಹಾಮುನಿ, ವಾಮದೇವ ಮಹರ್ಷಿ, ಕಶ್ಯಪ ಮಹರ್ಷಿ, ಸರತ್ಕಾರು ಮುನಿ, ಮೌದ್ಗಲ್ಯಮುನಿ, ಮೌದ್ಗಲ್ಯಸ, ಕರ್ಣಮುನಿ, ಧೌಮಮಹರ್ಷಿ ಹೀಗೆ ಅನೇಕ ಗೊತ್ರ ಇವರಲ್ಲಿ ಗುರುತಿಸಬಹುದು. ಇತ್ತೀಚೆಗೆ ಇವರು ಆರ್ಯವೈಶ್ಯರೆಂದು ಕರೆದುಕೊಳ್ಳುತ್ತಾರೆ. ಈ ಸಮುದಾಯವು ಪಿತೃನಡವಳಿಯ ಹೊರ ಬಾಂಧವ್ಯದ ಗೋತ್ರಗಳನ್ನು ಹೊಂದಿದೆ. ಸೋದರಮಾವನ ಮಗಳು ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ಅವಿಭಕ್ತ ಕುಟುಂಬ ಮಾದರಿಗಳು ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಇವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಬ್ಯಾಂಕ್, ವ್ಯಾಪಾರ, ಸ್ವಯಂ-ಉದ್ಯೋಗ, ಸಣ್ಣ ಹಾಗೂ ದೊಡ್ಡ ಪ್ರಮಾಣದ ಉದ್ದಿಮೆಗಳನ್ನು ನಡೆಸುವುದರಲ್ಲಿ ನಿರತರಾಗಿದ್ದಾರೆ. ತಮ್ಮ ಸಮುದಾಯದ ಅಭಿವೃದ್ಧಿಗಾಗಿ ‘ಅಖಿಲ ಭಾರತ ವೈಶ್ಯ ಸಂಘಟನೆ’ಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಂಘಟನೆಯನ್ನು ಸಹ ಹೊಂದಿದ್ದಾರೆ. ಇವರು ನಾಗ, ವಿಷ್ಣು, ನಾರಾಯಣ, ಕನ್ನಿಕಾಪರಮೇಶ್ವರಿ ದೈವಗಳನ್ನು ಪೂಜಿಸುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿ ಇರುವ ಈ ಸಮುದಾಯದ ಜನರ ಎಲ್ಲಾ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಕನ್ನಡಕ್ಕಾಗಿ ಕೈಯೆತ್ತು ಇದೋ ವಾಗ್ದೇವಿಯ ಹರಕೆಯ ಶಿಶುವಾಗಿ ನಿನಗೆ ಕೈಮುಗಿದು ನಮಸ್ಕರಿಸಿ ಬಿನ್ನವಿಸುತ್ತೇನೆ: ನನ್ನ ನಮಸ್ಕರಕ್ಕಾದರೂ ನಿನ್ನ ‘ಅಲ್ಪತೆ’ ತೊಲಗಲಿ; ನಿನ್ನ ಹೃದಯದಲ್ಲಿ ‘ಭೂಮ’ ಚೇತನ ಉದ್ದೀಪನವಾಗಿ ತೊಳಗಲಿ; ಕನ್ನಡ ನುಡಿದೀವಿಗೆಯಿಂದ ನಾಡ ಬಾಳು ಬೆಳಗಲಿ! ನನ್ನ ನಮಸ್ಕಾರದಿಂದ ನಿನ್ನ ಆಹಂಕಾರವಳಿದು ಅಲ್ಲಿ ದೇವತ್ವ ಸಂಚಾರವಾಗುತ್ತದೆಂದು ನಂಬಿ ಭಗವತಿ ಶ್ರೀ ಸರಸ್ವತಿಯ ಈ ಹರಕೆಯನ್ನು ನಿನ್ನಲ್ಲಿ ಬಿನ್ನವಿಸುತ್ತಿದ್ದೇನೆ. ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲ ಯೋಗಿ, ನೀನು ಯಾರೆ ಆಗಿರು, ಎಲ್ಲಿಯೆ ಇರು, ಕನ್ನಡವನ್ನು ಕೈಬಿಡದಿರು.
ನಾಳೆ ಎಂದರಾಗದು; ಮುಂದೆ ಎಂದಾರಗದು; ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿಯಲ್ಲವೆ! ನೀರಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೆ!
ಇದು ನಿನ್ನ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ; ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ! ಏನೊ ನಡುವೆ ನಾಲ್ಕು ದಿನ ವಿಧಿ ಮುನಿಯೆ ಸಿರಿಯಳಿದು, ಮನೆ ಮುರಿಯೆ ಬೀದಿ ಸೇರಿದ ಮಾತ್ರದಿಂದ ನಿನ್ನತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತುಬಿಡುವೆಯ? ಸ್ವತಂತ್ರನಾದಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?
ಅನ್ಯಮೋಹಕ್ಕೆ ಇಂದು ಅಕಾಶವಿಲ್ಲ. ಮೀನಮೇಷಕೆ ಇದು ಸಮಯವಲ್ಲ. ಧೈರ್ಯವಿರಲಿ; ಶ್ರದ್ಧೆಯಿರಲಿ; ಮನಸ್ಸು ಚಂಚಲವಾಗದಿರಲಿ!
ಕನ್ನಡಕ್ಕಾಗಿ ಕೈಯೆತ್ತು; ನಿನ್ನಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗಿತ್ತದೆ.
ಇಂದು; ನಾಳೆಯಲ್ಲ. ತಿಳಿ, ತಿಳಿ! ತಿಳಿದು ಉಳಿ, ಇಲ್ಲ ಅಳಿ!
ಏಳ್! ಗೆಲ್ ! ಬಾಳ್ ! ಓಂ ಶಾಂತಿಃ ಶಾಂತಿಃ ಶಾಂತಿಃ
ಸುಗ್ಗಿ ಬರುತಿದೆ
೧
ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗಸೊಗವ ತರುತಿದೆ!
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ
ಸುಗ್ಗಿ ಮೂಡುತಿರುವುದು!
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು!
೨
ಬಂಡನುಂಡು ದುಂಬಿವಿಂಡು ಹಾಡುತಿಹವು ಹಾರುತ,
ಮತ್ತ ಮಧು ಮಾಸವಿದು ಬನ್ನಿರೆಂದು ಸಾರುತ.
ಜಾರುತಿಹುದು ಮಾಗಿ ಚಳಿ,
ಕುಸುಮಿಸಿರುವ ಲತೆಗಳಲಿ
ಮೆರೆಯುತಿಹವು ಸೊಕ್ಕಿದಳಿ
ಮುಕ್ತಜೀವರಂದದಿ!
ಉಲಿಯೆ ಪಿಕ, ಗಳಪೆ ಶುಕ, ಸುಗ್ಗಿ ಬಂದಿತಂದದಿ!
೩
ಮಾಮರಂಗಳಲಿ ವಿಹಂಗತತಿಯ ನಿಸ್ವನಂಗಳಿಂ,
ತಳಿರ ಸೊಂಪನಲರ ಜೊಂಪನಾಂತ ಬನಬನಂಗಳಿಂ,
ನಲಿವ ಪಚ್ಚೆಯುಡೆಯನುಟ್ಟು,
ಅರಳಿದರಳುಗಳನು ತೊಟ್ಟು,
ಹಿಮದ ಮಣಿಯ ಮಾಲೆಯಿಟ್ಟು
ತಣಿದು ಸೋಲೆ ಕಣ್ಮನಂ
ಕರೆವಳೋವಿ ಬನದ ದೇವಿ ತನ್ನ ಸುಗ್ಗಿಯಾಣ್ಮನಂ!
೪
ಹಾರಿ ಮೆರೆವ ಜಾರಿ ಹರಿವ ತೊರೆಯ ತಂಪು ದಡದೊಳು,
ಮೇಲೆ ಭಾನು ತೇಲೆ, ನಾನು ಕುಳಿತು ಮರದ ಬುಡದೊಳು
ತಿರೆಯ ಸಿರಿಯ ನೋಡುತಿರುವೆ;
ಕುರಿತು ಹಾಡ ಹಾಡುತಿರುವೆ;
ಸೊಬಗಿನೊಡನೆ ಕೂಡುತಿರುವೆ
ಕರಗಿ ಮುಳುಗಿ ತೇಲುತ!
ತೊರೆದ ಗಂಡನೆದುರುಗೊಂಡ ಕೋಮಲೆಯನು ಹೋಲುತ!
೫
ತುರುಗಳೆಲ್ಲ ಮೇಯೆ, ಗೊಲ್ಲ ಬಸಿರಿಮರದ ನೆಳಲಲಿ
ಮಲಗಿಸಿಹನು ಮಧುವನವನು ಮುದವನುಲಿವ ಕೊಳಲಲಿ!
ನಿಂತು ಮೇವ ಮರೆತುಬಿಟ್ಟು,
ಕಿವಿಯನೆರಡ ನೆಟ್ಟಗಿಟ್ಟು,
ಗೊಲ್ಲನೆಡೆಗೆ ದಿಟ್ಟಿಯಿಟ್ಟು
ಬರೆದ ಚಿತ್ರದಂದದಿ
ಗವಿಗಳೆಲ್ಲ ಸವಿಯ ಸೊಲ್ಲನಾಲಿಸಿಹವು ಚಂದದಿ!
೬
ಗಿರಿಗಳಿರಾ, ತೊರೆಗಳಿರಾ, ಎಲೆ ವಿಹಂಗಮಗಳಿರಾ,
ತರುಗಳಿರಾ, ಬನಗಳಿರಾ, ಮಗಮಗಿಪ ಸುಮಗಳಿರಾ,
ಸೊಬಗೆ ನನ್ನಿ ಎಂದು ಸಾರಿ;
ನನ್ನಿಯೆ ಸೊಬಗೆಂದು ತೋರಿ;
ಸೊಗದ ಸೊದೆಯ ತಿರೆಗೆ ಬೀರಿ,
ಒಲ್ಮೆ ಸೊಬಗು ಸೊಗದಲಿ
ಪರಮಪುರುಷನಮಲ ಹರುಷವಿಹುದ ಸಾರಿ ಜಗದಲಿ!
೭
ಮಧುವೆ ಬಾರ! ಮುದವ ತಾರ! ನೀನೆ ದೇವದೂತನು!
ಪರದ ಚಿಂತೆ ಮರೆಯದಂತೆ ಕಳುಹುವನು ವಿಧಾತನು!
ಬುವಿಯ ಸಿಂಗರಿಸುತ ಬಾರ!
ಪರದ ಬೆಳಕನಿಳೆಗೆ ತಾರ!
ಸೊಬಗೆ ಶಿವನು ಎಂದು ಸಾರ!
ಬಾರ ಶಕ್ತಿದಾಯಕ!
ಹಳೆತ ಕೂಡಿ ಹೊಸತು ಮಾಡಿ ಬಾರೆಲೆ ಋತುನಾಯಕ
ನಟರಾಜ
೧
ಸೂರ್ಯನು ಚಂದ್ರನು ಭೂಮಿಯು ಗ್ರಹಗಳು
ಕಾಣುವ ಕಾಣದ ತಾರೆಗಳು
ಆದಿಯೊಳೆಲ್ಲಾ ಒಂದಾಗಿರಲು,
ಕರಗುತ ಕುದಿಯುತ ಹೊಳೆಯುತಲಿರಲು,
ಮಿಡುಕದೆ ಚಲಿಸದೆ ಮೌನದೊಳಿರಲು;
ಕಾಲದೇಶಗಳು ಮೈಮರೆತಿರಲು,
ಚೇತನ ಜಡದೊಳಗವಿತಿರಲು,
ಸುಂದರ ನದಿ ವನ ಗಿರಿ ಝರಿ ಎಲ್ಲಾ
ಬೆಂಕಿಯ ಮುದ್ದೆಯೊಳಡಗಿರಲು,
ವೀಣೆಯ ಮೀಂಟಲು ತೊಡಗಿದೆ ನೀನು,
ದಿವ್ಯ ಸನಾತನ ವೈಣಿಕನೆ!
೨
ಬೀಣೆಯ ದನಿಯಿಂಚರವನು ಕೇಳಿ
ಕಣ್ದೆರೆದೆದ್ದುದು ಬ್ರಹ್ಮಾಂಡ!
ಹರಿದುದು ಆದಿಯನರಿಯದ ನಿದ್ದೆ;
ಕುಣಿಯಲು ತೊಡಗಿತು ಬೆಂಕಿಯ ಮುದ್ದೆ.
ಕಾಲದೇಶಗಳು ಮೈತಿಳಿದೆದ್ದುವು;
ಚೇತನ ಜಡದಿಂ ಪೊರಮಡಲೆಳಸಿತು,
ಮೆಲ್ಲನೆ ಶಕ್ತಿಯು ಮೂಡಿದುದು!
ವೀಣೆಯ ಮಿಡಿಯುತ ಕುಣಿಯಲು ತೊಡಗಿದೆ
ಮಾಯಾ ನರ್ತಕ ನಟರಾಜ!
ವೀಣೆಯೆ ಭೇರಿಯ ರೂಪವ ತಾಳಿತು;
ನಡುಗಿತು ಭಯದಲಿ ಬ್ರಹ್ಮಾಂಡ!
೩
ಗಿರ್ರನೆ ತಿರುಗುವ ಬೆಂಕಿಯ ಮುದ್ದೆಯು
ಪುಡಿಪುಡಿಯಾಯಿತು ನೃತ್ಯದಲಿ!
ಕಿಡಿಗಳು ಹಬ್ಬುತ ನಾನಾ ದೆಸೆಗೆ
ಕುಣಿದುವು ಭಯದಲಿ ತಾರೆಗಳಾಗಿ;
ರವಿಯಂದದಿ ನಿಂತುದು ಕಿಡಿಯೊಂದು.
ಗ್ರಹಗಳ ರೂಪವನಾಂತುವು ಕೆಲವು
ಭಯದಲಿ ಗುರುವಿಗೆ ಕೈಮುಗಿದು;
ಜಡದಿಂ ನೆಗೆಯಿತು ಸಂತಸದಿಂದ
ಜಯಜಯ ಎನ್ನುತ ಚೇತನವು!
ಭೂಮಿಯು ರವಿಯಿಂ ದೂರಕೆ ಹಾರಿ
ತಿರುಗಲು ತೊಡಗಿತು ಬೆರಗಾಗಿ!
೪
ಭೂಮಿಯ ಮೆಯ್ಯಿಂ ಸಿಡಿದಾ ತಿಂಗಳು
ಬಲಗೊಂಡೆಸೆದುದು ಸೌಮ್ಯದಲಿ!
ಆನಂದಾಖ್ಯೆಯ ತಾಳಿತು ವೀಣೆ;
ಧರ್ಮದ ಹೆಸರನು ಹೊಂದಿತು ಭೇರಿ!
ನಡುಗುವ ಭೂಮಿಯ ಬಳಿ ನೀ ಬಂದೆ
ಚೆಲುವಿನ ಮೋಹದ ರೂಪವ ಧರಿಸಿ,
ಪುಣ್ಯ ಪುರಾತನ ವೈಣಿಕನೆ!
ಬಳಿಯಲಿ ಬೀಣೆಯ ಮೀಟುತ ನಿಂತೆ;
ಉರಿಯುವ ಗೋಳವು ತಂಪಾಯ್ತು!
ತರಳೆಯ ರೂಪದಿ ನಲಿಯುತ ನಗುತ
ಹೊರಹೊಮ್ಮಿದಳೈ ಭೂದೇವಿ!
೫
ವಿಶ್ವದ ಚೆಲುವೇ ಮೈಗೊಂಡಂದದಿ
ನಿನ್ನೆದುರಾಡಿದಳೆಳೆವೆಣ್ಣು!
ಮೋಹಕೆ ಸಿಲುಕಿದೆ, ಹೇ ಸನ್ಯಾಸಿ;
ಚುಂಬಿಸಿಯಾಲಿಂಗಿಸಿ ಮೈಮರೆತೆ!
ಹುಟ್ಟಿದುವಾಗಲೆ ನದಿ ವನ ಖಗ ಮಿಗ;
ಜನಿಸಿದನಾಗಲೆ ತಿರೆಯ ಬಸಿರಿನಲಿ
ನಿನ್ನನೆ ಹೋಲುವ ಮಾನವನು!
ನಿನ್ನಾ ಚೆಲುವಿನ ಕಂದನನೆತ್ತಿ
ಮೋಹದೊಳಾತನನೆದೆಗೊತ್ತಿ
ಮುದ್ದಿಸಿ, ಚುಂಬಿಸಿ, ಕಣ್ಮರೆಯಾದೆ;
ಯೋಗಿಯೆ, ವೈಣಿಕ, ನಟರಾಜ!
No comments:
Post a Comment