Friday, June 13, 2025

ಸರ್ವಸಹಗಾಮಿ

  teluguwala       Friday, June 13, 2025


ಮುಗಿಲಿನ ಮನೆಯಿಂದ ಎಡೆಬಿಡದೆ ಜಿನುಗುವ ಮಂಜಿನ ಸೋನೆಯ ಬೆಳ್ದೆರೆಯ ಮರೆಯ ಹಿಂಗಡೆಯಲ್ಲಿ ಮಾಗಿಯ ಉಷೆ ನಾಚಿ ಬೆಳ್ಪೇರಿಹಳು. ಇಬ್ಬನಿಯ ಬೆಳ್ಮಬ್ಬು ಮಲೆನಾಡಿನ ವನಪರ್ವತ ಕಂದರಗಳನ್ನು ತಬ್ಬಿರುವುದು.

ಉದಯ ಸೂರ್ಯದೇವನ ಜ್ಯೋತಿರ್ಮಯವಾದ ಸ್ವರ್ಣರಥದ ಶ್ವೇತ ಸಪ್ತಾಶ್ವಗಳು ಮಾಗಿಯ ಚಳಿಯಲ್ಲಿ ಮೈಯುಡುಗಿ ಮರವಟ್ಟು ಪೂರ್ವಾಚಲವ ಅಡರಲಾರದೆ ಸೋತು ಬೆಚ್ಚನೆ ಸುಯ್ದು ತಿಣುಕುತ್ತಿರುವುವು. ಅರುಣಸಾರಥಿ ಕುದುರೆಗಳನು ಬೋಳೈಸಿ ಚಪ್ಪರಿಸಿ ಚೋದಿಸಿ ಕೋಪದಿಂದ ಕೆಂಪೇರುತಿಹನು.

ಎಚ್ಚತ್ತ ವಿಹಂಗಮಗಳು ತರುಪರ್ಣಕುಟೀರಗಳಲ್ಲಿ ಹುದುಗಿ ಮಂಜು ಹಿಂಜರಿಯಲೆಂದು ಮೌನಧ್ಯಾನಾಸಕ್ತವಾಗಿಹವು.
ಇಬ್ಬನಿ ತಬ್ಬಿದ ಮರದೆಲೆಗಳಿಂದ ಹನಿ ತೊಟ್ಟಿಕ್ಕುತ್ತಿದೆ. ವಸಂತ ವಿಯೋಗದ ವಿರಹಯಾತನೆಯಿಂದ ಶ್ವೇತವಸನ ಧಾರಿಣಿಯಾಗಿ ಅವಕುಂಠಿತೆಯಾದ ವನರಮಣಿ ಕಂಬನಿಗರೆದು ನೀರವವಾಗಿ ರೋದಿಸುವಂತಿದೆ.

ಕಣಿವೆಯಲ್ಲಿರುವ ಹಳ್ಳಿಯ ಗುಡಿಸಲಿನಲ್ಲಿ ಪೇರೊಲೆಯ ಬೆಂಕಿ ಚಳಿಯೊಡನೆ ಹೋರಾಡುತ್ತಿದೆ. ಕೊರೆಯುವ ಕುಳಿರ್ಗಾಳಿಯಲ್ಲಿ ಸೆಡೆತು ನಡುಗಿ ಹಳ್ಳಿಗರು ಅಗ್ನಿದೇವನ ಮುಂದೆ ತಮ್ಮ ಪುಟ್ಟ ಸಂಸಾರಗಳ ಸಣ್ಣ ಕೊರತೆಗಳನು ಕುರಿತು ಅಹವಾಲು ಗೈಯುತಿದಾರೆ. ಅವರಿಗೂ ಜಗತ್ತಿಗೂ ನಡುವೆ ಸಹ್ಯಾದ್ರಿಯ ವನಪರ್ವತಶ್ರೇಣಿಗಳು ತತ್ತ್ವಜ್ಞಾನಿಗಳಂತೆ ಧೀರವಾಗಿ ನಿಂತಿವೆ!
ಒಲೆಯ ಬಳಿಯಲ್ಲಿ ಸಣ್ಣ ನಾಯಿಯೊಂದು ಕುಳಿತು ಎಲ್ಲವನ್ನೂ ತಿಳಿದುಕೊಳ್ಳುವಂತೆ ನಟಿಸುತ್ತಿದೆ. ಕ್ಷುದ್ರಕ್ಷುದ್ರತಮವಾದ ಶುನಕವೂ ನಿನ್ನ ದೃಷ್ಟಿಗೆ ಬಾಹಿರವಲ್ಲ! ಅನಂತ ಯಾತ್ರಿಕರ ಅನಂತ ಸಹಗಾಮಿಯೆ, ನಾಯಿಯ ಬಳಿಯಲಿ ನಿಂತು ಮುಗುಳುನಗೆ ಬೀರುವ ನಿನ್ನನು ನೋಡಿ, ನಿನ್ನನು ಪಡೆದವನು ನಾನೊಬ್ಬನೇ ಎಂಬ ಹೆಮ್ಮೆ ನಾಚಿ ದೂರವಾದುದಯ್ಯ!
ಅಮಿತ ವೇಷಧಾರಿ, ಸುಗ್ಗಿಯ ವೇಷದಂತೆ ಮಾಗಿಯ ವೇಷವೂ ನಿನಗೆ ಒಪ್ಪುತ್ತದೆ.

ಕಾಳಿ ಬರುವಳು

ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ,
ರಕ್ತ ರುಂಡಮಾಲಿಯು!
ಡಮ ಡಮ ಡಮ ಡೋಲು ಬಡಿ!
ಭಂ ಭಂ ಭಂ ಕಾಕು ನುಡಿ!
ಧಿಮಿ ಧಿಮಿ ಧಿಮಿ ಎಂದು ಕುಣಿ!
ಜಯ ಜಯ ಜಯ ಎಂದು ಮಣಿ!
ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ,
ರಕ್ತ ರುಂಡಮಾಲಿಯು!
ವ್ಯೋಮವೊಂದು ಕೈಯ ತಾಳ
ಭೂಮಿಯೊಂದು ಕೈಯ ತಾಳ
ಬಡಿದು ಬಡಿದು ಬರುವಳು!
ಜನನ ಒಂದು ಅಡಿಯ ಹೆಜ್ಜೆ
ಮರಣ ಒಂದು ಅಡಿಯ ಹೆಜ್ಜೆ
ಕುಣಿದು ಕುಣಿದು ಬರುವಳು!
ಮಿಂಚನೊಂದು ಕೈಲಿ ಹಿಡಿದು
ಸಿಡಿಲನೊಂದು ಕೈಲಿ ಹಿಡಿದು
ಬಾನ ಡೋಳ ಬಡಿಯುತ
ಮನವನೊಮ್ಮೆ ಮೆಟ್ಟಿ ತುಳಿದು
ಎದೆಯನೊಮ್ಮೆ ಮೆಟ್ಟಿ ನಲಿದು
ಕಿವಿದೆರೆಯನು ಒಡೆಯುತ,
ನೋಡು, ಬರುತಲಿರುವಳದೋ
ರುದ್ರ ಭದ್ರ ಕಾಳಿಯು!
ದೇವಿ, ಚಂಡಿ, ಚಾಮುಂಡಿ
ರಕ್ತ ರುಂಡಮಾಲಿಯು!
ಒಂದು ಅಡಿಯನಿಟ್ಟು ತೆಗೆಯೆ
ಶ್ಮಶಾನ ಮೆರೆವುದು!
ಮತ್ತೊಂದು ಅಡಿಯನಿಟ್ಟು ತೆಗೆಯೆ
ಉದ್ಯಾನ ನಲಿವುದು!
ದೇಶವೊಂದು ಕೈಯ ಖಡ್ಗ
ಬಡಿಬಡಿದು ಬರುವಳು;
ಕಾಲವೊಂದು ಕೈಯ ಖಡ್ಗ
ಕಡಿಕಡಿದು ಬರುವಳು!
ಹೊಳೆಹೊಳೆಯುವ ಕಣ್ಗಳಿಂದ
ಕಾರ್ಮಿಂಚ ಕಾರುತ,
ಗುಡು ಗುಡುಗುವ ಕಂಠದಿಂದ
ಕಾರ್ಮೊಳಗ ಬೀರುತ,
ಜ್ವಾಲಾಮುಖಿಯ ರುದ್ರಶಿಖಿಯ
ಕೈಲಿ ಹಿಡಿದು ಬರುವಳು;
ಹಿರಿಯ ಇರುಳ ಕರಿಯ ತಿರುಳ
ಮೈಲಿ ಮುಡಿದು ಬರುವಳು;
ಕಡಲ ವಾಣಿಯವಳ ವಾಣಿ
ಕೂಗಿ ರೇಗಿ ಬರುವಳು;
ಕೃಷ್ಣ ಮೇಘ ಸದೃಶ ವೇಣಿ
ತೂರಿ ಬೀರಿ ಬರುವಳು!
ಪ್ರಳಯದಿಂ ಸೃಷ್ಟಿಯನು
ಮೇಲೆತ್ತಿ ಬರುವಳು;
ಪ್ರಳಯದಲಿ ಸೃಷ್ಟಿಯನು
ಕೆಳಗೊತ್ತಿ ಬರುವಳು!
ಅವ್ಯಕ್ತ ಬ್ರಹ್ಮದೆದೆಯ ಮೇಲೆ
ಕುಣಿದಾಡಿ ಬರುವಳು!
ವ್ಯಕ್ತ ಬ್ರಹ್ಮವೆನ್ನ ಲೀಲೆ
ಎನುತೋಡಿ ಬರುವಳು!
ವಿಜಯ ರಣೋನ್ಮತ್ತೆಯಾಗಿ
ಬರುವಳಾದಿ ಮಾಯೆಯು;
ಮಕ್ಕಳೆದೆಯ ಅಳಲ ನೀಗಿ
ಬರುವಳದೋ ತಾಯಿಯು!
ನೋಡು ಬರುತಲಿರುವಳದೋ
ರುದ್ರ ಭದ್ರ ಕಾಳಿಯು;
ದೇವಿ, ಚಂಡಿ, ಚಾಮುಂಡಿ,
ರಕ್ತರುಂಡಮಾಲಿಯು.

ಮೊಯನ

ಮೊಯನರು ಮಲೆಯಾಳಿ ಬೋವಿಗಳೆಂದು, ಮೊಗೆಯನರೆಂದು ಪರಿಚಿತರಾಗಿದ್ದಾರೆ. ಇವರ ಮೌಕಿಕ ಪರಂಪರೆಯಂತೆ ಇವರು ಕೇರಳದಿಂದ ವಲಸೆ ಬಂದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡ ಮಾತನಾಡಿ ಕನ್ನಡ ಮತ್ತು ಮಲೆಯಾಳಂ ಲಿಪಿಯನ್ನು ಬಳಸುವರು. ಈ ಸಮುದಾಯದಲ್ಲಿ ‘ಇಲ್ಲಮ್’ ಎಂಬ ಮಾತೃ ನಡವಳಿಯ ಹೊರಬಾಂಧವ್ಯ ವಿವಾಹದ ಕುಲಗಳಿವೆ. ಇವರಲ್ಲಿ ಇಲ್ಲಮ್‌ಗಳು ಮುಖ್ಯವೆಂದು ಪರಿಗಣಿಸಲಾಗುತ್ತದೆ – ಕನ್ನಿರಿಯಮ್, ಕರಿಪಟ್ಟಿ, ಕಿರಿಯನ್, ಬಾಯಕ್ಕಾರ ಮೋಯನ್, ಕಡಕ್ಕಟ್, ಮೋಯನ್, ಭೀಮತ್‌ಮೋಯನ್, ಇತ್ಯಾದಿ. ಇಲ್ಲಮ್ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹವು ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹವು ಇವರಲ್ಲಿ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಿರಿಯ ಮಗ ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುತ್ತಾನೆ. ಸ್ತ್ರೀಯರು ಮನೆಗೆಲಸಗಳೊಡನೆ ಮೀನು ಹಿಡಿಯುವುದರಲ್ಲೂ ನಿರತರಾಗಿರುತ್ತಾರೆ.

ಇವರ ಪರಂಪರಾಗತ ಉದ್ಯೋಗ ಮೀನು ಹಿಡಿಯುವುದು. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ನೌಕರಿ, ವ್ಯಾಪಾರ ಇತ್ಯಾದಿ ಇತ್ತೀಚಿನ ವೃತ್ತಿಗಳು. ಹಲವರು ಮುಂಬಯಿ ಮತ್ತಿತರ ನಗರಗಳಿಗೆ ವೃತ್ತಿಗಾಗಿ ಕೆಲಸ ಹೋಗಿದ್ದಾರೆ. ಇವರು ಭಗವತಿ, ಸೋಮನಾಥ ಮತ್ತು ವೆಂಕಟರಮಣ ದೈವಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಇವರ ಧಾರ್ಮಿಕ ವಿಶೇಷಜ್ಞನಾಗಿ ಧಾರ್ಮಿಕ ವಿಧಿಗಳನ್ನು ನಡೆಸಿಕೊಡುತ್ತಾನೆ. ಸ್ತ್ರೀ-ಪುರುಷರಿಬ್ಬರು ಸಾಂಪ್ರದಾಯಿಕವಾದ ಜಾನಪದ ಹಾಡುಗಳನ್ನು ಹಾಡುತ್ತಾರೆ. ಇವರು ಗಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೂ ಇತ್ತೀಚೆಗೆ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸಮುದಾಯದ ಜನರು ಹೊಂದಿದ್ದಾರೆ.

ರಾಜಪುರಿ/ಬಾಲ್ವಲಿಕಾರ

ರಾಜಪುರಿಗಳು ಮಹಾರಾಷ್ಟ್ರದಿಂದ ವಲಸೆ ಬಂದ ಸಮುದಾಯದವರಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಕಣ್ಣಾನೂರು, ಕಾಸರಗೋಡು ತಾಲ್ಲೂಕುಗಳಲ್ಲಿ ವಾಸಿಸುತ್ತಾರೆ. ಕರ್ನಾಟಕದಲ್ಲಿ ರಾಜಪುರಿ, ರಾಜಪುರ್ ಹಾಗೂ ಬಾಲ್-ವಾಲಿಕಾರ್‌ಗಳೆಂದೂ ಕರೆಯಲಾಗುತ್ತದೆ. ಇವರು ಬಾಲ್ವಲಿಕಾರರೆಂದೂ ಪರಿಚಿತರಾಗಿದ್ದಾರೆ. ಮದ್ರಾಸಿನ ಜನಗಣತಿ ವರದಿಯಂತೆ ರಾಜಪುರಿ ಕೊಂಕಣಸ್ಥ ಎಂಬ ಹೆಸರನ್ನು ರಾಜಪುರಿಗಳಿಗೆ ಕೊಡಲಾಗಿದೆ. ಇವರು ಅರವತ್ತಾರು ಕೊಂಕಣ ಗ್ರಾಮಗಳಲ್ಲಿ ವಾಸಿಸುವ ಕೊಂಕಣಸ್ಥ ಜನಗಳಿಗೆ ಅರವತ್ತಾರು ಗುಂಪುಗಳೆಂದು ಹೇಳಲಾಗಿದೆ (ಥರ್ಸ್ಟನ್, ೧೯೦೯). ಮರಾಠಿ, ತುಳು ಹಾಗೂ ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ. ಏಳು ಮುನಿಗಳ (ಋಷಿ) ಹೆಸರಿನ ಆಧಾರದ  ಮೇಲೆ ಹೆಸರಿಸುವ ಕಶ್ಯಪ, ವಿಶ್ವಾಮಿತ್ರ, ಶ್ರೀವತ್ಸ, ಭಾರಧ್ವಾಜ, ಅತ್ರಿ, ಜಮದಗ್ನಿ ಮತ್ತು ಕೌಂಡಿನ್ಯಗಳೆಂಬ ಗೋತ್ರಗಳನ್ನು ಹೊಂದಿದ್ದಾರೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಮತ್ತು ಗೋತ್ರಮಟ್ಟದಲ್ಲಿ ಹೊರಬಾಂಧವ್ಯ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಮಾವನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ತಂದೆಯ ನಂತರ ಹಿರಿಯ ಮಗನು ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ.

ವ್ಯವಸಾಯ ಇವರ ಪಾರಂಪಾರಿಕ ವೃತ್ತಿ. ಕೆಲವರು ಸ್ವಂತ ಜಮೀನನ್ನು ಹೊಂದಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಇಂದು ವ್ಯಾಪಾರ, ವ್ಯವಹಾರ, ಶ್ರಮಗೂಲಿ, ಕೆಲವರು ಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳನ್ನು ಮಾಡುತ್ತಾರೆ. ಇವರು ಶಿವ, ವಿಷ್ಣು, ಗಣೇಶ, ಇತ್ಯಾದಿ ದೈವಗಳನ್ನು ಪೂಜಿಸುತ್ತಾರೆ. ಇತ್ತೀಚೆಗೆ ಅಭಿವೃದ್ಧಿ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೊಂದುತ್ತಿದ್ದಾರೆ. ಕೆಲವು ಮಟ್ಟಿನ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಒಲವು ಹೊಂದಿದ್ದಾರೆ.

ಸನಾತನಿಯೊಬ್ಬನ ಮನೆ

ಕೇರಳದ ಒಂದು ಗ್ರಾಮವಾದ ಮುಂಕೋಂಬುಗೆ ಹೋದಾಗ ಸಂಜೆಯಾಗಿತ್ತು. ನನಗಿಂತ ಮುಂಚೆ ಬಂದ ದೇವಸ್ವಂ ಬೋರ್ಡಿನ ಭಾಸ್ಕರನ್ ನಾಯರ್ ದೋಣಿಯಲ್ಲಿ ಹೋಗಿಯಾಗಿತ್ತು. ನನಗಾಗಿ ಮತ್ತೆ ದೋಣಿ ಬಂತು. ಹಿಂದೊಂದು ಕಾಲದಲ್ಲಿ ಈ ಸಂಪರ್ಕವೂ ದುರ್ಲಭವಾಗಿದ್ದ ಮುಂಕೋಂಬುಗೆ ಹೋಗುವಾಗ ನನಗಿದ್ದ ಕುತೂಹಲ ‘ನಂಬೂದರಿ ಇಲ್ಲಂ’ ಒಂದನ್ನು ನೋಡಬಹುದೆಂಬುದು.

ಎಲ್ಲರೂ ನನಗಾಗಿ ಕಾದಿದ್ದರು. ಅದೇ ದ್ವೀಪದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕದಲ್ಲಿರುವ ಡಾ. ಎನ್.ಎನ್. ಪಣಿಕ್ಕರ್ ಎಂಬ ಯುವಕ ಫೋಟೋ ತೆಗೆಯಲು ನಿಂತಿದ್ದ. ನನ್ನನ್ನು ಕರೆದವರು ತುಂಬ ಜಂಬದಲ್ಲಿ ಅವನನ್ನು ಪರಿಚಯಿಸಿದರು. ‘ಇವತ್ತು ಅವನೂ ಸಂಸ್ಕೃತದಲ್ಲಿ ಮಾತಾಡುತ್ತಾನೆ. ಅಮೆರಿಕದಲ್ಲಿ ಡಾಕ್ಟರಾದವನು! ಆದರೂ ಸಂಸ್ಕೃತದಲ್ಲೇ ಮಾತನಾಡುತ್ತಾನೆ!’ ಇದರಿಂದ ನಾನು ಬಹಳ ಆಶ್ಚರ್ಯವನ್ನೂ ಖುಷಿಯನ್ನೂ ಪಟ್ಟವನಂತೆ ನಟಿಸುತ್ತ ಮುಂದೆ ನಡೆದೆ. ಎಲ್ಲರಂತೆ ಪಣಿಕ್ಕರ್ ಮುಂಡು ಉಟ್ಟು ಬುಷ್ ಶರ್ಟ್ ತೊಟ್ಟಿದ್ದ. ಅವನ ಕೈಯಲ್ಲಿ ಕಂಪ್ಯೂಟರೈಸ್ಡ್ ಕ್ಯಾಮರಾ ಇತ್ತು. ಅದರ ಇನ್ಫ್ರಾ ರೆಡ್ ರೇ ದೂರವನ್ನಳೆದು ಚಿತ್ರ ತೆಗೆಯುತ್ತದೆಂದು ನಂತರ ವಿವರಿಸಿದ. ಇನ್ನೊಬ್ಬರು ಸ್ವಾಗತಕ್ಕೆ ಕಾದಿದ್ದವರು – ತುಂಬ ಬಡಕಲು ದೇಹದ, ಸೊರಗಿದ ಮುಖದ, ಸ್ನೇಹಪರ ಮೃದುಕಣ್ಣಿನ ವಿಷ್ಣು ನಂಬೂದರಿ. ಈ ಪ್ರದೇಶದ ಹಿಂದೊಂದು ಕಾಲದ ಲಕ್ಷಾಧಿಪತಿ ಎಂದೂ, ಅವರ ಮನೆಯಲ್ಲೇ ನಾನು ಮುಕ್ತಾಯಗೊಳಿಸುವ ಸಂಸ್ಕೃತ ಶಿಬಿರ ನಡೆದದ್ದೆಂದೂ ಪರಿಚಯಿಸಲಾಯಿತು. ಅವರದೇ ನಾನು ನೋಡಲು ಬಯಸಿದ್ದ ಹಳೆಯ ಕಾಲದ ‘ನಂಬೂದರಿ ಇಲ್ಲಂ.’

ಸಡಿಲವಾದ ಮೈಕಟ್ಟಿನ ವಿಷ್ಣು ನಂಬೂದರಿ ಸ್ಥಿತಿವಂತರಂತೇನೂ ಕಾಣಲಿಲ್ಲ; ಸಾಮಾನ್ಯ ಮಲಯಾಳಿಗಳಲ್ಲಿ ಕಾಣುವ ನುಗ್ಗುವ ದಾರ್ಷ್ಟ್ಯ ಪಡೆದವರಂತೆಯೂ ಕಾಣಲಿಲ್ಲ. ಪಳೆಯುಳಿಕೆಯಂತಿದ್ದರು. ಅವರ ಕಣ್ಣಲ್ಲಿ ಮೌನ ಮಡುಗಟ್ಟಿದಂತಿತ್ತು. ಇನ್ನೊಂದು ಲೋಕದಲ್ಲಿರುವವರಂತೆ ಕಂಡ ವಿಷ್ಣು ನಂಬೂದರಿಗಳು, ನಮ್ಮವರೆಂದು ನನಗನ್ನಿಸಿದ್ದು ಅವರು ನೀಟಾಗಿ ಬಾಚಿಕೊಂಡಿದ್ದ ಕ್ರಾಫು ತಲೆಯಿಂದ. ಅವರ ನುಣುಪಾದ ಟೆರಿಲಿನ್ ಶರ್ಟಿನಿಂದ. ಮಾಸಿದ ತೇಜಸ್ಸಿನ ವಿಷ್ಣು ನಂಬೂದರಿ ನನಗೆ ಒಂದು ಬೃಹತ್ ಟಾಲ್ಸ್ಟಾಯ್ ಕಾದಂಬರಿಯ ಸೊರಗಿದ ಗ್ರಾಮೀಣ ಪಾತ್ರವಾಗಿ ಕಂಡರು. ಭಗವತಿ ದೇವಸ್ಥಾನದೊಳಕ್ಕೆ ಹೋಗುವ ಮುಂಚೆ ಪಾರಕ್ಷೆ ಕಳಚಿದೆ. ಎರಡು ಸಾಲಿನಲ್ಲಿ ಹೂ ಹಿಡಿದು ನಿಂತ ಪುಟಾಣಿ ಹುಡುಗಿಯರು; ಮುಂದೆ ವಾಲಗದವರು. ಹೀಗೆ ಪ್ರವೇಶ ಮಾಡಲ್ಪಟ್ಟ ನನಗೆ ಗೌರವರ್ಣದ ಇನ್ನೊಬ್ಬ ನಂಬೂದರಿ ಪುರೋಹಿತರು ಹಿಡಿದುಕೊಂಡು ನಿಂತ ಪೂರ್ಣಕುಂಭದ ಸ್ವಾಗತ ಸಿಕ್ಕಿತು-ಭಗವತಿ ದೇವಾಲಯದ ಎದುರು. ಹಲವು ಪುತ್ರರನ್ನೂ, ದೀರ್ಘ ಆಯಸ್ಸನ್ನೂ, ಧನಕನಕ ಭಾಗ್ಯವನ್ನೂ ಅವರ ಮಂತ್ರದಿಂದ ಪಡೆದು ನಾನು ವೇದಿಕೆ ತಲುಪಿದೆ.
ಸಂಸ್ಕೃತದಲ್ಲಿ ನನ್ನ ಬಗ್ಗೆ ಒಂದು ಕವನವನ್ನು ರಚಿಸಿ ವಿದ್ಯಾರ್ಥಿಯೊಬ್ಬ ಓದಿದ. ಅದು ಎಷ್ಟು ಉತ್ಪ್ರೇಕ್ಷೆಯ ಕವನವಾಗಿತ್ತೆಂದರೆ ಯಾರ ಬಗ್ಗೆಯಾದರೂ ಆಗಬಹುದಿತ್ತು.   ಉತ್ಪ್ರೇಕ್ಷೆಯಲ್ಲಿ ನಾನು ಉಬ್ಬುವುದಕ್ಕೆ ಅವಕಾಶವೇ ಇರಲಿಲ್ಲ. ಅಷ್ಟು ಉತ್ಪ್ರೇಕ್ಷೆಯಲ್ಲಿ ಹೊಗಳಿಸಿಕೊಂಡವನು ಅನಾಮಧೇಯನೇ ಆಗಿಬಿಡುತ್ತಾನೆ. ನನ್ನದೆಂದು ಕವನದಲ್ಲಿದ್ದುದು ನನ್ನ ಹೆಸರು ಮಾತ್ರ – ಈ ಹೆಸರೂ ಉತ್ಪ್ರೇಕ್ಷಾಲಂಕಾರವಾಗಿ – ಬಿಟ್ಟಿದ್ದರಿಂದ ‘ನಾನು’ ಕರಗಿ ಹೋಗಿದ್ದೆ.

ಈ ಬಗೆಯ ಸಂಸ್ಕೃತದಲ್ಲಿ ಏನೂ ಹೊಸದನ್ನು ಹೇಳಲು ಸಾಧ್ಯವಿಲ್ಲವೆನ್ನಿಸಿತು – ವಕ್ರವಾಗದೆ, ಹೊಂಚದೆ, ಕನಿಷ್ಠವನ್ನು ಕಾಣಲಾರದೆ, ಬಳುಕಲಾರದೇ ಇರುವ ಭಾಷೆ ಹೊಸದನ್ನು ಹೇಗೆ ಹೇಳಿತು? ಯಾವುದು ಹತ್ತಿರ, ಯಾವುದು ದೂರ ವಿವೇಚಿಸಲಾರದ್ದು ಜೀವಂತ ಕಣ್ಣಾದೀತೆ?
ಸ್ವದೇಶಿಯಾಗಿದ್ದು ವಿಮರ್ಶಾಪ್ರಜ್ಞೆ ಕಳೆದುಕೊಳ್ಳದ, ವಿಮರ್ಶಾ ಪ್ರಜ್ಞೆಯ ಅನುಮಾನದಿಂದ ಪ್ರಜ್ಞೆಯಲ್ಲಿ ವಿದೇಶಿಯಾಗಿಬಿಡುವ ಭಾರತೀಯ ದ್ರಷ್ಟಾರರ ಬಗ್ಗೆ ನಾನು ಮಾತಾಡಿದೆ. Critical insiders ಬಗ್ಗೆ, ಬಸವ, ತುಕಾರಾಂ, ಕಬೀರ್, ಗಾಂಧಿ, ಶಂಕರ, ನಾರಾಯಣ ಗುರು ಇವರ ಬಗ್ಗೆ, ಹಲವು ಸೃಷ್ಟಿಶೀಲ ಜಗಳಗಳ ಭಾರತದ ಬಗ್ಗೆ ಅನುಮಾನದ ಒಳನೋಟ ಸತ್ಯದ ಸ್ವೀಕಾರಕ್ಕೆ ಹೇಗೆ ಅಗತ್ಯ ಎಂಬ ಬಗ್ಗೆ-
ಮಾತಾಡುವಾಗ ನನ್ನ ಗಮನವೆಲ್ಲ ಇದ್ದದ್ದು ವಿಷ್ಣು ನಂಬೂದರಿಗಳ ಮೇಲೆ. ಅವರ ಇಲ್ಲಂ ನೋಡುವ ಕುತೂಹಲ ಅಂತೂ ತಣಿಯಿತು. ಹೊರ ಜಗತ್ತನ್ನು ಅಳಿಸಿ ಹಾಕುವ ಅವರ ಮನೆಯ ಒಳಾಂಗಣಗಳಲ್ಲಿ ದಿಕ್ಕುತಪ್ಪಿ ನಿಂತಿದ್ದಾಗ ನನ್ನನ್ನು ಒಯ್ದ ಬ್ರಾಹ್ಮಣನಲ್ಲದ, ಆದರೆ ಮೇಲಿನ ಅಂತಸ್ತಿನ ನಾಯರ್ ಹೇಳಿದರು : ‘ಕೆಲವು ವರ್ಷಗಳ ಹಿಂದೆ ಯಾರೂ – ನನ್ನಂತಹ ಶ್ರೀಮಂತ ಕೂಡ – ಇಲ್ಲಿ ಒಳಗೆ ಹೀಗೆ ಬರುವುದು ಸಾಧ್ಯವೇ ಇರಲಿಲ್ಲ’ ಅಮೆರಿಕನ್ ಪಣಿಕ್ಕರ್- ಇಲ್ಲೇ ಹುಟ್ಟಿ ಬೆಳೆದ ಅವರೂ ಸ್ವಲ್ಪ ಮೇಲಿನ ಶೂದ್ರರೇ – ನಮ್ಮೆಲ್ಲರ ಫೋಟೋ ತೆಗೆಯುತ್ತ ಅಂದರು. ‘ನಾನು ಇಲ್ಲಿ ಬಂದದ್ದು ಇದೇ ಮೊದಲ ಸಾರಿ.’ ನನ್ನ ಕುತೂಹಲವೆಂದರೆ ನಾಯರ್ ಜನರ ನಾಯಕಟ್ಟಿನ ಮನೆಗೂ, ನಂಬೂದರಿ ಮನೆಗೂ ಏನು ವ್ಯತ್ಯಾಸವೆಂಬುದು.

ನಾಯರ್ಗಳ ಹೆಂಗಸರು ನಂಬೂದರಿ ಹೆಂಗಸರಂತಲ್ಲ, ನಂಬೂದರಿ ಹೆಂಗಸರು ಪೂರ್ಣ ಸ್ವತಂತ್ರರು. ನಾಯರ್ ಹೆಂಗಸರು ಆಸ್ತಿಗೆ ಹಕ್ಕುದಾರರು. ನಮ್ಮ ಅಳಿಯ ಸಂತಾನದಂಥ ವ್ಯವಸ್ಥೆ ಅವರದು. ಹಿರಿಮಗನಾದ ನಂಬೂದರಿಗೆ ಮಾತ್ರ ಮದುವೆ. ಉಳಿದ ನಂಬೂದರಿಗಳು ನಾಯರ್ ಹೆಂಗಸರ ಜೊತೆ ಕೂಡಿಕೆ ಮಾಡಿಕೊಳ್ಳುತ್ತಿದ್ದದ್ದು. ರಾತ್ರಿ ಮಲಗಲು ಬರುವ, ಹಗಲು ಮುಖ ತೋರಿಸದ ಬೀಜದ ಗೂಳಿಯಂತಹ ಅಪರಿಚಿತ ಜೀವನ. ತಮಗೆ ಹುಟ್ಟಿದ ಮಕ್ಕಳೇ ತಮಗೆ ಅಸ್ಪೃಶ್ಯರು. ನನ್ನ ಹಲವು ಮಲಯಾಳಿ ಲೇಖಕ ಗೆಳೆಯರು ತಮ್ಮ ಪ್ರಜ್ಞೆಯ ಒಳಕ್ಕೇ ಬಾರದ ತಮ್ಮ ತಂದೆಯವರ ಬಗ್ಗೆ ನನ್ನೊಡನೆ ಮಾತಾಡಿದ್ದಾನೆ. ಅಯ್ಯಪ್ಪ ಪಣಿಕ್ಕರ್ ಬರೆದ ‘ಕುಟುಂಬ ಪುರಾಣಂ’ನಲ್ಲಿ ಎಲ್ಲ ಸಂಬಂಧಿಗಳೂ ಇದ್ದಾರೆ- ತಂದೆಯೊಬ್ಬರ ಹೊರತಾಗಿ.

ವಿಷ್ಣು ನಂಬೂದರಿಗಳ ತಾತನ ಫೋಟೋ ನೋಡಿದೆ. ದೊಡ್ಡ ಯಜುರ್ವೇದಿಗಳಂತೆ; ಉದಾರಿಗಳಂತೆ; ಊಟ ಮಾಡುವ ಮೊದಲು ಹೊರಗೆ ಬಂದು ನಿಂತು ಎದುರು ಕಂಡ ಬ್ರಾಹ್ಮಣರನ್ನೆಲ್ಲ ಒಳಗೆ ಕರೆದು ಅನ್ನ ಸಂತರ್ಪಣೆಯ ನಿತ್ಯೋತ್ಸವದಲ್ಲಿ ಬದುಕಿದವರಂತೆ. ನಾಯರ್ ಹೇಳಿದರು : ‘ಈಗ ಇದೆಲ್ಲವೂ ಹಳೆಯ ಪುರಾಣ. ಭೂಶಾಸನ ಬಂದು ನಂಬೂದರಿಗಳೆಲ್ಲರೂ ಆಸ್ತಿ ಕಳೆದುಕೊಂಡರು.’

ಸೋಮಾರಿ ಜೀವನ; ಕೇವಲ ಸಂಸ್ಕೃತ ವಿದ್ಯಾಭ್ಯಾಸ; ಹಿರಿಯವನನ್ನು ಬಿಟ್ಟರೆ ಉಳಿದವರಿಗೆ ಸಂಸಾರದ ಜವಾಬ್ದರಿಯಿಲ್ಲ. ಸಾಂಸಾರಿಕ ಜವಾಬ್ದಾರಿ ಹೊರದ ಒಂದು ಇಡೀ ಸಂಸ್ಕೃತಿ ಹೀಗೆ ನಶಿಸಿ ಹೋಯಿತು.
ಅಡುಗೆ ಮನೆಯಿಂದ ತೋರವಾದ ದೇಹದ ವೃದ್ಧರೊಬ್ಬರು, ಬೆನ್ನು ಬಾಗಿದವರು, ಪಂಚೆಯನ್ನು ಸರಿಪಡಿಸಿಕೊಳ್ಳುತ್ತ ಹೊರಬಂದರು – ಯಾವುದೋ ಪುರಾತನ ಜೀವವೊಂದು ಗುಹೆಯಿಂದ ಹೊರಬಂದಂತೆ. ಅವರ ಬುದ್ಧಿ ಸ್ವಾಧೀನದಲ್ಲಿ ಇಲ್ಲವೆಂಬ ನನ್ನ ಭಾವನೆ ತಪ್ಪಿರಬಹುದು. ಜೊತೆಯಲ್ಲಿ ಫೋಟೋ ಹೊಡೆಸಿಕೊಳ್ಳಲು ನಿಂತರು. ಯಾರನ್ನೂ ಅವರು ಗಮನಿಸಿದಂತೆ ಕಾಣಲಿಲ್ಲ. ತುಂಬಾ ವೃದ್ಧರಿರಬಹುದು., ತೊಂಬತ್ತು ದಾಟಿರಬಹುದು ಎಂದು ನಾನೆಂದುಕೊಂಡರೆ ನಿಜವಲ್ಲ – ಅವರಿನ್ನೂ ಎಪ್ಪತ್ತು ಮುಟ್ಟಿರಲಿಲ್ಲ, ಬಣ್ಣದಲ್ಲಿ ಅವರು ಕಾಶ್ಮೀರಿ ಇರಬಹುದು, ಇಟಾಲಿಯನ್ ಇರಬಹುದು – ಕೇರಳದ ಸೂರ್ಯನಿಂದ ತೊಯ್ದಿರದ ಚರ್ಮ ಅವರದ್ದು. ಮರಗಳಲ್ಲಿ ಕಟ್ಟಿದ ಗೋಡೆ ಮತ್ತು ಸೂರುಗಳಿಂದಾಗಿ ಒಳಗಿನ, ಒಳಗಿನ, ಒಳಗಿನ ಪದರಗಳಲ್ಲಿ ತನ್ನವರನ್ನು ತಂಪಾಗಿ ಕಾಪಾಡುವ ಮನೆಯ ಸೃಷ್ಟಿಯ ಸಾರದಂತೆ ಅವರು ಕಂಡರು.

ಏನನ್ನು ಉಳಿಸಿಕೊಳ್ಳಲು ಹೋಗಿ ಮನುಷ್ಯ ಏನನ್ನು ಕಳೆದುಕೊಂಡು ಬಿಡುತ್ತಾನೆಂಬುದು ನನಗೆ ಅರ್ಥವಾಯಿತು. ಪರಮ ‘ಶೂದ್ರ’ ಈಡವ ಜಾತಿಯ ನಾರಾಯಣ ಗುರುವಿನ ಮನಸ್ಸಿಗೆ ವೇದಗಳು, ಶಂಕರರು ಬಾರದಿದ್ದಲ್ಲಿ ಈ ಮನೆಯೊಳಗಂತೂ ಸನಾತನವಾದ್ದು ಜೀವಂತ ಉಳಿಯುತ್ತಿರಲಿಲ್ಲ.
ಕೇರಳದ ಕೊಟ್ಟಾಯಂನಲ್ಲಿ ಇದ್ದಾಗ ಮಾಡಿಕೊಂಡ ಒಂದು ಟಿಪ್ಪಣಿ ದಿ. ೨–೧–೧೯೮೮.
ಲಂಕೇಶ್ಪತ್ರಿಕೆಯಲ್ಲಿ ಪ್ರಕಟಿತ.

 ಸುತ್ತೂರು, ಹೆಡತಲೆ, ತಗಡೂರು, ಕಳಲೆ, ಬದನವಾಳು

ಮೈಸೂರಿನ ದಕ್ಷಿಣ ಭಾಗಕ್ಕೆ ಸುಮಾರು ೨೪ ಕಿ.ಮೀ. ದೂರದಲ್ಲಿರುವ ನಂಜನಗೂಡು ತಾಲೂಕು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದ್ದು, ಹಲವಾರು ಕೈಗಾರಿಕೆಗಳನ್ನು ಒಳಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು ೮೦೦ ಮೀ. ಎತ್ತರದಲ್ಲಿದ್ದು ೯೯೧ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ದಕ್ಷಿಣಕ್ಕೆ ಗುಂಡ್ಲುಪೇಟೆ ತಾಲೂಕು (ಚಾಮರಾಜನಗರ ಜಿಲ್ಲೆ), ಉತ್ತರಕ್ಕೆ ಮೈಸೂರು ತಾಲೂಕು, ಪೂರ್ವಕ್ಕೆ ಟಿ. ನರಸೀಪುರ ತಾಲೂಕು ಹಾಗೂ ಪಶ್ಚಿಮಕ್ಕೆ ಎಚ್.ಡಿ. ಕೋಟೆ ತಾಲೂಕುಗಳನ್ನು ಗಡಿಭಾಗವಾಗಿ ಹೊಂದಿದೆ. ಐತಿಹಾಸಿಕ ಮಹತ್ವವನ್ನು ಸಾರುವ ಈ ಪ್ರದೇಶವನ್ನು ಆಳಿದ ಗಂಗ, ಚೋಳ, ಹೊಯ್ಸಳ, ವಿಜಯನಗರ ಅರಸರ ಕೊಡುಗೆಗಳು ಮತ್ತು ಅವರ ಆಡಳಿತ ಕಾಲದ ಮೇಲೆ ಬೆಳಕು ಚೆಲ್ಲುವ ಸುಮಾರು ೪೦೨ ಶಾಸನಗಳು ದೊರೆತಿವೆ. ನಂಜನಗೂಡಿನ ಹಲವು ಸ್ಥಳಗಳಲ್ಲಿ ಬೃಹತ್ಶಿಲಾಯುಗದ ಕುರುಹುಗಳನ್ನು ವಿದ್ವಾಂಸರು ಗುರುತಿಸಿದ್ದಾರೆ.
 
ನಂಜನಗೂಡು
ದೂರ ಎಷ್ಟು?
ತಾಲ್ಲೂಕಿನಿಂದ: ೧ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೪ ಕಿ.ಮೀ.
 
ಶ್ರೀ ಶ್ರೀಕಂಠೇಶ್ವರ ದೇವಾಲಯ
ಕಪಿಲ, ಕೌಂಡಿನ್ಯ ನದಿಗಳ ಸಂಗಮ ಸ್ಥಳದ ದಂಡಾಕಾರಣ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ರಾಕ್ಷಸನ ಸಂಹಾರದೊಂದಿಗೆ ಈ ಕ್ಷೇತ್ರಕ್ಕೆ ಶಿವನ ಆಗಮನವಾಗಿ ವಾಸಸ್ಥಾನವಾಗಿದ್ದರಿಂದ
 
ಹದಿನಾರು ಕಂಬಗಳ ಮಂಟಪ
ಗರಳಪುರಿ ಎಂದೂ, ತನ್ನ ತಾಯಿಯನ್ನು ಹತೈಗೈದ ಪಾಪ ಪರಿಹಾರಕ್ಕಾಗಿ ತಂದೆಯ ಮಾರ್ಗದರ್ಶನದಂತೆ ಈ ಸ್ಥಳಕ್ಕೆ ಪರಶುರಾಮರು ಭೇಟಿ ನೀಡಿ ತಪಸ್ಸು ಮಾಡಿದ್ದರಿಂದ ಪರಶುರಾಮ ಕ್ಷೇತ್ರವೆಂದೂ, ಅಹಲ್ಯಾ ದೇವಿಯ ಪತಿಯಾದ ಗೌತಮರು ದೇವಸ್ಥಾನ ಸ್ಥಾಪಿಸಿ ತಪಸ್ಸು ಆಚರಿಸಿದ್ದರಿಂದ ಈ ಸ್ಥಳಕ್ಕೆ ಗೌತಮಪುರಿ, ಎಂದೂ ಹೆಸರುಗಳಿವೆ. ನಂಜನ್ನು ಉಂಡವನ ವಾಸಸ್ಥಾನ-ಶಿವನ ವಾಸಸ್ಥಾನದಿಂದ ನಂಜನಗೂಡು ಎಂಬ ಹೆಸರು ಬಂದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಶ್ರೀ ಶ್ರೀಕಂಠೇಶ್ವರ ಸನ್ನಿಧಿಯೊಂದಿಗೆ ನಂಜನಗೂಡಿನ ರಸಬಾಳೆ ಹಾಗೂ ಬಿ.ವಿ. ಪಂಡಿತರ ಸದ್ವಿದ್ಯಾ ಆಯುರ್ವೇದ ಶಾಲೆಗಳು ನಂಜನಗೂಡಿನ ಹೆಸರನ್ನು ದೇಶಾದ್ಯಂತ ಪಸರಸಿವೆ. ಶ್ರೀ ಶ್ರೀಕಂಠೇಶ್ವರ ದೇವಾಲಯದ ಹಕೀಮ ನಂಜುಂಡ ಪಚ್ಚೆ ಲಿಂಗವು ಟಿಪ್ಪುಸುಲ್ತಾನರ ಕೊಡುಗೆಯಾಗಿದೆ.
ಇಲ್ಲಿನ ಇತರ ಸ್ಥಳಗಳೆಂದರೆ- ಪರಶುರಾಮ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ, ಕಪಿಲಾ ಮತ್ತು ಕೌಂಡಿನ್ಯ ನದಿಗಳು, ದಳವಾರಿ ರೈಲ್ವೆ ಸೇತುವೆ.
ಕೈಗಾರಿಕ ಕ್ಷೇತ್ರಗಳು: ಬನ್ನಾರಿ ಅಮ್ಮನ್ಸಕ್ಕರೆ ಕಾರ್ಖಾನೆ, ನೆಸ್ಲೆ ಕಾರ್ಖಾನೆ, ಟಿ ವಿ ಎಸ್ಫ್ಯಾಕ್ಟರಿ, ಸೌತ್ಇಂಡಿಯಾ ಪೇಪರ್ಮಿಲ್ಸ್, ರೀಡ್ಅಂಡ್ಟೈಲರ್, ಎಟಿ ಅಂಡ್ಎಸ್.
 
ಸುತ್ತೂರು
ದೂರ ಎಷ್ಟು?
ತಾಲ್ಲೂಕಿನಿಂದ: ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೩ ಕಿ.ಮೀ.
 
ನಂಜನಗೂಡಿನಿಂದ ೨೩ ಕಿ.ಮೀ. ದೂರದಲ್ಲಿ ಮೈಸೂರಿನಿಂದ ದಕ್ಷಿಣಕ್ಕೆ ೨೮ ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮವು ಕಪಿಲಾ ನದಿ ತೀರದಲ್ಲಿದೆ. ಶ್ರೀ ಜಗದ್ಗುರು ವೀರಸಿಂಹಾಸನ ಸುತ್ತೂರು ಮಹಾಸಂಸ್ಥಾನ ಮಠಕ್ಕೆ ಒಂದು ಸಾವಿರಕ್ಕೂ ಮಿಗಿಲಾದ ಸುದೀರ್ಘ ಇತಿಹಾಸವಿದೆ.
ಚೋಳರ ದೊರೆ ರಾಜರಾಜರ ಆಳ್ವಿಕೆಯಲ್ಲಿ ಅವರ ಪ್ರಾರ್ಥನೆಯ ಮೇರೆಗೆ ಸುತ್ತೂರಿನಲ್ಲಿ ಕಪಿಲಾ ನದಿಯ ದಂಡೆಯ ಮೇಲೆ ಮಠವನ್ನು ಸ್ಥಾಪಿಸಲು ಶ್ರೀ ಶಿವರಾತ್ರಿ ಶಿವಯೋಗಿ ಮಹಾಸ್ವಾಮಿಗಳು ಅನುಗ್ರಹಿಸಿದರು. ಶಿಲಾ ಶಾಸನ ೧೬೪ ರ ಪ್ರಕಾರ ಸುತ್ತೂರು ಕ್ರಿ.ಶ.೯೫೫ರಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿದುಬರುತ್ತದೆ. ಶ್ರೀ ಸೋಮೇಶ್ವರ ದೇವಾಲಯ, ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಧಾರ್ಮಿಕ ಹಿನ್ನೆಲೆಯದಾಗಿದ್ದರೆ, ಗ್ರಾಮೀಣ ಪರಂಪರೆಯ ಪ್ರದರ್ಶನ ರಂಗವು ಕಲೆ, ಸಂಗೀತ ವಾದ್ಯ ಮೊದಲಾದವುಗಳನ್ನು ಪ್ರತಿಬಿಂಬಿಸುತ್ತದೆ.

ಶೈಕ್ಷಣಿಕ ಸಂಸ್ಥೆಗಳು, ಉಚಿತ ಪ್ರಸಾದ ನಿಲಯಗಳು, ವೈದ್ಯಕೀಯ ಮತ್ತು ಆರೋಗ್ಯ ಕೇಂದ್ರಗಳು, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು, ಕೃಷಿ ಸಂಶೋಧನಾ ಸೌಕರ್ಯಗಳು ಇತ್ಯಾದಿಗಳ ಮೂಲಕ ಸುತ್ತೂರು ಮಠದ ಚಟುವಟಿಕೆಗಳು ಭಾರತದ ಉದ್ದಗಲಕ್ಕೂ ಮತ್ತು ವಿದೇಶಗಳಲ್ಲಿ ಹಬ್ಬಿದೆ. ಇಲ್ಲಿ ಅನಾಥರು ಹಾಗೂ ಬಡವರ ಮಕ್ಕಳಿಗಾಗಿ ಉಚಿತ ವಿದ್ಯಾದಾನಕ್ಕಾಗಿ ಆಧುನಿಕ ಸೌಲಭ್ಯಗಳಿಂದ ಕೂಡಿದ ಉಚಿತ ವಸತಿಶಾಲೆ ಇದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಈ ವಸತಿಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುತ್ತಾರೆ.

ಹೀಗೆ ಬಹು ಆಯಾಮಗಳಿಂದ ಕೂಡಿದ ಸಂಸ್ಥೆಯಾಗಿದೆಯಲ್ಲದೆ ಸಾಮಾಜಿಕ ಜೀವನದ ಮುನ್ನಡೆಗೆ ಬಹು ದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದೆ. ಮಠದ ಜನಪರ ಕಲ್ಯಾಣ ಚಟುವಟಿಕೆಗಳು ವೀರಶೈವ ಸಮುದಾಯದ ಎಲ್ಲೆಕಟ್ಟುಗಳನ್ನು ಮೀರಿವೆಯಲ್ಲದೆ ಭಾರತೀಯ ಸಮಾಜದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ವ್ಯಾಪಕವಾಗಿ ಸಂಪೂರ್ಣವಾಗಿ ಆವರಿಸಿವೆ.
 
ಹೆಡತಲೆ
ದೂರ ಎಷ್ಟು?
ತಾಲ್ಲೂಕಿನಿಂದ: ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೮ ಕಿ.ಮೀ.
ನಂಜನಗೂಡಿನಿಂದ ೧೫ ಕಿ.ಮೀ. ದೂರದಲ್ಲಿರುವ ಈ ಊರಿಗೆ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವಿದೆ. ಇದು ಅರ್ಜುನನ ಹೆಂಡತಿಯಾದ ಉಲೂಚಿಯ ತವರು ಎಂದು ಪ್ರತೀತಿಯಿದೆ. ಮಣಿನಾಗಪುರಿ, ರತ್ನಪುರಿ ಎಂಬ ಹೆಸರುಗಳೂ ಇವೆ. ಕ್ರಿ.ಶ. ೧೨೭೨ರ ಕಟ್ನವಾಡಿ ಶಾಸನದ ಪ್ರಕಾರ ಎಡತಲೆ ಎಂಬ ಹೆಸರು ಈ ಊರಿಗಿತ್ತು. ಇತಿಹಾಸದ ಪ್ರಕಾರ ಈ ಗ್ರಾಮಕ್ಕೆ ಗಂಗ, ಹೊಯ್ಸಳ, ವಿಜಯನಗರ, ಮೈಸೂರಿನ ಒಡೆಯರ ಕಾಲದ ಸಂಬಂಧವಿದೆ ಮತ್ತು ಪಾಳೇಗಾರರು ಆಳಿದ ಊರು ಇದಾಗಿದೆ.

ಪ್ರಮುಖ ಸ್ಥಳಗಳು – ಕ್ರಿ.ಶ. ೧೨೯೨ರ ಹದಿನಾರು ಮುಖದ ಚಾವಡ ಹಾಗೂ ಲಕ್ಷ್ಮೀಕಾಂತ ದೇವಾಲಯ, ಕ್ರಿ.ಶ. ೧೨೯೭ರ ಹೊಯ್ಸಳರ ಕಾಲದ ಗೊಮ್ಮದೇವರು, ಕ್ರಿ.ಶ. ೧೩೧೫ರ ಹೊಯ್ಸಳರ ಕಾಲದ ಚೆಲುವರಾಯನ ಗುಡಿ, ಆನೆಕಲ್ಲು ದೇವಾಲಯ, ಭೀಮನಕೆರೆ, ಭಂಗಿಮಾರಮ್ಮನ ಗುಡಿಗಳು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.
 
ತಗಡೂರು
ದೂರ ಎಷ್ಟು?
ತಾಲ್ಲೂಕಿನಿಂದ: ೨೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: — ಕಿ.ಮೀ.

ನಂಜನಗೂಡಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಕಪ್ಪುಮಣ್ಣಿನಿಂದ ಕೂಡಿದ ಈ ಊರಿಗೆ ಯಂತ್ರಪುರಿ ಎಂಬ ಇನ್ನೊಂದು ಹೆಸರೂ ಇದೆ. ಅಂಕನಾಥೇಶ್ವರ, ಲಕ್ಷ್ಮೀರಮಣ ದೇವಸ್ಥಾನಗಳೂ ಇವೆ. ಈ ಗ್ರಾಮದಿಂದ ನಾಲ್ಕು ಕಿಮೀ. ದೂರದಲ್ಲಿ ಇರುವ ಕಾರ್ಯ ಗ್ರಾಮಕ್ಕೆ ಹೊಂದಿಕೊಂಡಂತೆ ಸಿದ್ದೇಶ್ವರ ಬೆಟ್ಟ ಇದೆ.

೦೫-೦೧-೧೯೩೪ರಲ್ಲಿ ಗಾಂಧೀಜಿಯವರು ಈ ಊರಿಗೆ ಭೇಟಿ ನೀಡಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರ ನೆನಪಿಗಾಗಿ ಸ್ಮಾರಕವೂ ಇದೆ ಹಾಗೂ ಖಾದಿಬಟ್ಟೆ ತಯಾರಿಕೆಯ ಕಾರ್ಖಾನೆಯೂ ಸಹ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ಹಾಗೂ ಪ್ರಥಮವಾಗಿ ಜಮಾನ್ಲಾಲ್ಪ್ರಶಸ್ತಿ ಪಡೆದ ಶ್ರೀ ತಗೂರು ರಾಮಚಂದ್ರರಾಯರು, ಶ್ರೀ ಟಿ ಎಸ್ಸುಬ್ಬಣ್ಣರವರು, ಇವರ ಜನ್ಮಸ್ಥಳ ಇದಾಗಿದೆ.
 
ಕಳಲೆ
ದೂರ ಎಷ್ಟು?
ತಾಲ್ಲೂಕಿನಿಂದ: ೦೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೧ ಕಿ.ಮೀ.
 
ನಂಜನಗೂಡಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿರುವ ಇದರ ಇನ್ನೊಂದು ಹೆಸರು ವೇಣುಪುರ. ೧೮೩೧ ರವರೆಗೆ ಇಲ್ಲಿ ಆಡಳಿತ ನಡೆಸುತ್ತಿದ್ದ ಕಳಲೆಯ ದಳವಾಯಿಗಳು ವಿಜಯನಗರದ ಅರಸರು ಹಾಗೂ ಮೈಸೂರಿನ ಅರಸರ ಆಳ್ವಕೆಯಲ್ಲಿ ಮಹತ್ವದ ಸ್ಥಾನದಲ್ಲಿದ್ದರು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ.


ಲಕ್ಷ್ಮೀಕಾಂತ ದೇವಾಲಯ, ಸೋಮೇಶ್ವರ ದೇವಾಲಯ, ಮಲ್ಲೇಶ್ವರ ದೇವಾಲಯಗಳು ಇಲ್ಲಿರುವ ಪ್ರಾಚೀನ ಕಾಲದ ದ್ರಾವಿಡ ಶೈಲಿಯ ದೇವಾಲಯಗಳು.
ವೀರರಾಜ, ದೇವರಾಜ, ಕರಚೂರಿನ ನಂಜರಾಜ, ಚೆಲುವಾಂಬೆ ಇಲ್ಲಿನ ಸಾಹಿತಿಗಳು.
 
ಬದನವಾಳು
ನಂಜನಗೂಡಿನಿಂದ ಪೂರ್ವಕ್ಕೆ ೯ ಕಿ.ಮೀ. ದೂರದಲ್ಲಿದೆ. ೧೯೩೪ರಲ್ಲಿ ಗಾಂಧೀಜಿಯವರು ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ. ಇದರ ನೆನಪಿಗೆ ಒಂದು ಸ್ಮಾರಕವಿದೆ.

logoblog

Thanks for reading ಸರ್ವಸಹಗಾಮಿ

Previous
« Prev Post

No comments:

Post a Comment