Monday, May 26, 2025

ಮೇದ

  teluguwala       Monday, May 26, 2025

ಮೇದಾರರು ಗುಲ್ಬರ್ಗಾ, ಧಾರವಾಡ, ಕೊಪ್ಪಳ, ಬಳ್ಳಾರಿ, ಹಾವೇರಿ, ಕೋಲಾರ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಬರುತ್ತಾರೆ. ಪ್ರಾಚೀನ ಕಾಲದಿಂದಲೂ ಬಿದಿರು ಮತ್ತು ಬೆತ್ತದ ಉಪಯೋಗಗಳು ಮಾನವ ಜೀವನದಲ್ಲಿ ತೊಟ್ಟಿಲಿಂದ ಹಿಡಿದು ಚಟ್ಟದ ವರೆಗೂ ಹಾಸು ಹೊಕ್ಕಾಗಿದೆ. ಮೊರ, ಬುಟ್ಟಿ, ಬೀಸಣಿಕೆ, ತೊಟ್ಟಿಲು ಇತ್ಯಾದಿ ಸಾಮಗ್ರಿಗಳನ್ನು ಬಿದಿರಿನಿಂದ ತಯಾರಿಸಿ ದಿನಬಳಕೆ ವಸ್ತುಗಳಾಗಿ ಉಪಯೋಗಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕರ್ನಾಟಕ ರಾಜ್ಯದಲ್ಲಿ ಈ ತಯಾರಿಕೆ ಒಂದು ಜನಾಂಗದ ಕುಲಕಸುಬು ಎಂದರೆ ತಪ್ಪಾಗಲಾರದು. ಸುಮಾರು ೧೩ನೇ ಶತಮಾನದಲ್ಲಿ ಇತಿಹಾಸದ ಪ್ರಮುಖ ಸಮಾಜ ಸುಧಾರಕರಲ್ಲೊಬ್ಬರಾದ ಬಸವಣ್ಣನ ಕಾಲದಲ್ಲಿ ಮೇದಾರ ಜನಾಂಗದ ಇರುವಿಗೆ ಬಗ್ಗೆ ಮಾಹಿತಿ ಇದೆ. ಬಸವಣ್ಣನೊಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಪಾಲ್ಗೊಂಡಿದ್ದ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮೇದಾರ ಕೇತಯ್ಯ ಮುಂತಾದವರು ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಹೆಸರೇ ತಿಳಿಸುವಂತೆ ಇವರಲ್ಲಿ ಪ್ರತಿಯೊಬ್ಬರೂ ಒಂದೊಂದು ಜನಾಂಗವನ್ನು ಪ್ರತಿನಿಧಿಸುವ ಮುಖಂಡರು. ಪ್ರತಿಯೊಂದು ಜನಾಂಗವೂ ತಮ್ಮದೇ ಆದ ಉದ್ಯೋಗಕ್ಕೆ ಮೀಸಲು. ಈ ವೃತ್ತಿ ವಂಶಪಾರಂಪರ್ಯವಾಗಿ ಬಂದಿರುತ್ತದೆಯೆಲ್ಲದೆ. ಬಿದಿರಿನಿಂದ ನಿ‌ತ್ಯೋಪಯೋಗಿ ವಸ್ತುಗಳನ್ನು ತಯಾರಿಸುವುದು ಮೇದಾನ ಜನಾಂಗಕ್ಕೆಂದೇ ಮೀಸಲಾಗಿರುವ ಕುಲಕಸುಬು. ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಕಾಣಬರುವ ಮೇದಾರ ಕೇತಯ್ಯ ಒಬ್ಬ ಮುಖಂಡ. ಹಿರಿಯನಾದ ಮೇದಾರ ಕೇತಕಯ್ಯನನ್ನು ಈಗಲೂ ಈ ಸಮುದಾಯದವರ ಕುಲದೇವರಾಗಿ ಪೂಜಿಸುತ್ತಾರೆ. ಈ ಜನಾಂಗದ ಕುಟುಂಬದಲ್ಲೊಬ್ಬರಾದರೂ ಕೇತಯ್ಯ, ಕೇತಮಾರ, ಕೇತಮ್ಮ ಹೆಸರಿನವರಿರುತ್ತಾರೆ.

ಇವರ ಕುಲಕಸಬಾದ ಬಿದಿರು ಮತ್ತು ಬೆತ್ತಗಳಿಂದ ಗೃಹೋಪಯೋಗಿ ವಸ್ತುಗಳ ತಯಾರಿಕಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೇದಾರರು ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿಯೂ ಇದ್ದಾರೆ. ಮೂಲತಃ ಇವರದು ಗುಂಪಿನಲ್ಲಿ ವಾಸಮಾಡಿಕೊಂಡು ವೃತ್ತಿ  ನಡೆಸುವ ಪ್ರವೃತ್ತಿ. ಇವರು ವಾಸಿಸುವ ಊರುಗಳಲ್ಲಿ ಇವರದ್ದೇ ಆದ ಬೀದಿಯನ್ನು ಮೇದಾರ ಬೀದಿ ಎಂದೇ ಅಂಕಿತ ಮಾಡುತ್ತಾರೆ. ವರ್ಷದ ನವಬಿದಿರನ್ನು ಕೆಲಸಕ್ಕೆ ಉಪಯೋಗಿಸುವ ಮೊದಲು ಪೂಜಿಸಿ ಹೊಸ ಬಿದಿರಿನ ಪೂಜೆ ಎಂಬ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿ ತದನಂತರ ನವಬಿದಿರನ್ನು ಕೆಲಸಕ್ಕೆ ಉಪಯೋಗಿಸುವುದು ರೂಢಿ.

ಮೇದ ಎಂಬುದು ಭಿನ್ನ ಭಾಷೆ ಮತ್ತು ಭಿನ್ನ ಭೌಗೋಳಿಕ ವಿಂಗಡಣೆಯಿಂದ ಕರ್ನಾಟಕದಲ್ಲಿರುವ ಎರಡು ಕೋಮುಗಳ ಸಾಮಾನ್ಯ ಹೆಸರಾಗಿದೆ. ಇವರಲ್ಲಿ ಒಂದು ಕೋಮಿನವರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲೇ ಇದ್ದು ಕೊಡವ ಹಾಗೂ ತುಳು ಮಾತನಾಡುತ್ತಾರೆ. ೧೯೨೧ರ ವರೆಗೆ ಈ ಜನ ಕೊಡಗಿನಲ್ಲಿ ಮಾತ್ರ ಪರಿಶಿಷ್ಟ ಪಂಗಡದವರಾಗಿದ್ದರು. ಇನ್ನೊಂದು ಮೇದ ಕೋಮಿನವರು ವಿಜಾಪುರ ಜಿಲ್ಲೆಯಲ್ಲಿ ಮೇದಾರ (ಬುಡ್ಡಿರ) ಸಮುದಾಯ. ಅಲೆಮಾರಿ ಜನಾಂಗವಾದ ಮೇದಾರರು ಮೂಲ ಆಂಧ್ರದವರಾದರೂ ನೆಲೆಸಿದ್ದು ಕರ್ನಾಟಕದಲ್ಲಿ. ಉತ್ತರ ಕರ್ನಾಟಕದ ಬಿಜಾಪುರ-ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಇವರ ಕುಟುಂಬಗಳು ಕಂಡುಬರುತ್ತವೆ. ಕೊಡವ ಮತ್ತು ಕನ್ನಡ ಭಾಷೆಯನ್ನು ಮಾತನಾಡುವ ಇವರು ಬಳಸುವ ಲಿಪಿ ಕನ್ನಡವಾಗಿದೆ. ಮೇದರಲ್ಲಿ ಯಾವುದೇ ಸಾಮಾಜಿಕ ಶ್ರೇಣಿಗಳಿಲ್ಲ,  ವೈವಾಹಿಕ ಸಂಬಂಧ ಬೆಳೆಸುವಾಗ ಎರಡೂ ಕುಟುಂಬಗಳ ಗುರುತಿರುವ ಸಂಬಂಧಗಳನ್ನು ಪರಿಗಣಿಸುತ್ತಾರೆ. ಸೋದರತ್ತೆ ಮತ್ತು ಸೋದರಮಾವನ ಮಗಳೊಂದಿಗೆ ವಿವಾಹಕ್ಕೆ ಅನುಮತಿ ಇದೆ.

ಮೇದರು ಮುಖ್ಯವಾಗಿ ಬುಟ್ಟಿ ಹೆಣೆಯುವವರು. ಬಿದಿರು, ಬೆತ್ತ ಸೀಳಿ ಕುಸುರಿನ ಕೆಲಸ ಮಾಡುತ್ತಾರೆ. ಇವರು ಬಿದಿರಿನಿಂದ ಮಾಡುವ ಕರಕುಶಲತೆ ನಿಜಕ್ಕೂ ಆಶ್ಚರ್ಯ. ಬಿದಿರಿನಿಂದ ಚಾಪೆ, ಕಸದಪುಟ್ಟಿ, ಮರ, ಕುಂಟರಿಗೆ ಊರುಗೋಲು, ನಿಚ್ಚಣಿಕೆ, ಇತ್ಯಾದಿಗಳನ್ನು ಮಾಡುವಲ್ಲಿ ಸಿದ್ಧಹಸ್ತರು. ಈ ಕಲೆಯನ್ನು ಸರ್ಕಾರ ಹಾಗೂ ಅಕಾಡೆಮಿಗಳಿಂದ ಗುರುತಿಸದೆ ಇರುವುದು ದುರದೃಷ್ಟಕರ. ಕೆಲವರು ಕಾಫಿ ತೋಟ ಮತ್ತು ಭತ್ತದ ಗದ್ದೆಗಳಲ್ಲಿ ಶ್ರಮಿಕ ಕೂಲಿಗಳಾಗಿ ದುಡಿಯುತ್ತಾರೆ. ಭೂಹಿಡುವಳಿದಾರರ ವಿಶೇಷ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಡೊಳ್ಳು ಬಡಿಯುತ್ತಾರೆ. ಹಬ್ಬಗಳಲ್ಲಿ ಮೇದರು ಸಂಗೀತ-ಗೋಷ್ಠಿಗಳನ್ನು ನಡೆಸುತ್ತಾರೆ. ಇವರು ಮಕ್ಕಳು ಕೂಡ ಶ್ರಮಿಕರಾಗಿ ದುಡಿಯುತ್ತಾರೆ. ಸಮುದಾಯ ಹಿರಿಯರ ಸಮಿತಿಯು ವಿವಾದಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದ್ದು ವಿವಾದಗಳಲ್ಲಿ ಅಪರಾಧಿಗಳಿಗೆ ಹಣದ ದಂಡ ಹೇರುತ್ತಾರೆ. ಇವರು ಪಾಶಾಣ ಮೂರ್ತಿಯಂತಹ ಭೂತದೊಂದಿಗೆ ಭಗವತಿ, ಕಾವೇರಿ, ಶಿವ, ಇತ್ಯಾದಿ ದೇವತೆಗಳನ್ನು ಪೂಜಿಸುತ್ತಾರೆ. ಕೊಡಗಿನಲ್ಲಿ ಇರುವ ಮೇದಾರಿಗೆ ಹುತ್ತರಿ ಮತ್ತು ಕಾಯ್ಲ್ ಮುಹೂರ್ತ ಮೇದರ ವಿಶೇಷ ಹಬ್ಬಗಳಾಗಿವೆ. ಬಿದಿರು ವಸ್ತುಗಳ ಮಾರಾಟಕ್ಕಾಗಿ ತಮಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಾದರೆ ಸೂಕ್ತ ಎನ್ನುತ್ತಾರೆ ಇವರು. ಆದರೂ ಬಡತನದ ಬವಣೆಯ ಮಧ್ಯೆ ಇವರದು ಛಲದ ಬದುಕು. ಮೇದಾರರು ತಯಾರಿಸುವ ಬೆತ್ತದ ವಸ್ತುಗಳನ್ನು ಸಾಮಾನ್ಯವಾಗಿ ಮಧ್ಯವರ್ತಿಗಳಿಗೆ ತಮ್ಮ ಮನೆಯಲ್ಲೇ ಮಾರಾಟ ಮಾಡಿಬಿಡುತ್ತಾನೆ. ಬರುವ ಆದಾಯದಲ್ಲಿ ಮಧ್ಯವರ್ತಿಗಳ ಪಾಲೇ ಹೆಚ್ಚೆಂದರೆ ಯಾರಿಗೂ ತಿಳಿಯುವ ವಿಷಯವಲ್ಲ. ಕೆಲವೊಮ್ಮೆ ಬೇಡಿಕೆಯಿಲ್ಲದಾಗ ಊರುಕೇರಿ ಸುತ್ತಿ ಮನೆಗಳ ಮುಂದೆ ಕೂಗುತ್ತ ಮಾರುವುದುಂಟು. ಇಂತಹ ಸನ್ನಿವೇಶಗಳಲ್ಲೂ ಇವರಿಗೆ ಒಳ್ಳೆಯ ಬೆಲೆಯು ಸಿಗದು. ಕೊಳ್ಳುವವರು ಮೇದಾರರ ವಸ್ತುಗಳನ್ನು ಹೇಗಾದರೂ ತಮಗೆ ಮಾರಾಟ ಮಾಡುತ್ತಾರೆಂದು ತಿಳಿದು, ಚೌಕಾಶಿ ಮಾಡಿ ಅತೀ ಕಡಿಮೆ ದರದಲ್ಲಿ ಖರೀದಿಸುತ್ತಾರೆ. ಸಾಕ್ಷರತೆಯ ಹೆಸರಿನಲ್ಲಿ ಸರಕಾರ ಹಣ ವ್ಯಯ ಮಾಡಿದರೂ, ನವಸಾಕ್ಷರತೆಯ ಯೋಜನೆಯ ಅರಿವು ಸಹ ಇವರಿಗೆ ಇಲ್ಲ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

logoblog

Thanks for reading ಮೇದ

Previous
« Prev Post

No comments:

Post a Comment